ಕೌಶಲ್ಯಾಭಿವೃದ್ಧಿ ಕೇಂದ್ರ ಸ್ಥಾಪನೆಯ ಗುರಿ…

ಕಲಬುರಗಿ: ಸ್ವಾತಂತ್ರ್ಯ ಪೂರ್ವದಲ್ಲಿ ಜನರಿಗೆ ಆಗು, ಹೋಗುಗಳ ವಿಷಯಗಳ ಬಗ್ಗೆ ಮಾಹಿತಿ ನೀಡುವ ಉದ್ದೇಶದಿಂದ ಬೆಳಗಾವಿಯಲ್ಲಿ ಆರಂಭವಾದ ಪತ್ರಿಕೆ ಇಂದು ಇಡೀ ಕರ್ನಾಟಕವನ್ನೇ ಪಸರಿಸಿದೆ. ಕಿತ್ತೂರು ಕರ್ನಾಟಕ, ಕಲ್ಯಾಣ ಕರ್ನಾಟಕ ಸೇರಿದಂತೆ ಎಲ್ಲೆಡೆ ಸಂಯುಕ್ತ ಕರ್ನಾಟಕ ಪತ್ರಿಕೆ ಅಭಿಮಾನಿ ಓದುಗರ ವಿಶ್ವಾಸವನ್ನು ಉಳಿಸಿಕೊಂಡು ಬಂದಿದ್ದೇವೆ. ಪತ್ರಿಕೆಯಿಂದ ಆಯೋಜನೆಗೊಂಡು ಯಶಸ್ವಿಯಾದ ಎಲ್ಲ ಕಾರ್ಯಕ್ರಮಗಳ ಹಿಂದೆ ಮಲ್ಲಿಕಾರ್ಜುನ ಖರ್ಗೆ ಅವರ ಆಶೀರ್ವಾದ, ಸಹಕಾರ ಬಹಳಷ್ಟಿದೆ ಎಂದು ಖ್ಯಾತ ನ್ಯಾಯವಾದಿ ಹಾಗೂ ಲೋಕ ಶಿಕ್ಷಣ ಟ್ರಸ್ಟ್‌ನ ಅಧ್ಯಕ್ಷರಾದ ಅಶೋಕ ಹಾರನಹಳ್ಳಿ ಹೇಳಿದರು.
ಕನ್ನಡ ಪತ್ರಿಕೋದ್ಯಮದ ಹಿರಿಯಣ್ಣ ಸಂಯುಕ್ತ ಕರ್ನಾಟಕ' ಪತ್ರಿಕೆಯ ಕಲಬುರಗಿ ಆವೃತ್ತಿಯ ಬೆಳ್ಳಿ ಮಹೋತ್ಸವದ ಪ್ರಯುಕ್ತ ಹೊಸ ಜೇವರ್ಗಿ ರಸ್ತೆಯ ಖಮಿತಕರ್ ಭವನದಲ್ಲಿ ಶುಕ್ರವಾರ ಏರ್ಪಡಿಸಿರುವಕಲ್ಯಾಣ ಸಿರಿ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಮುಂದಿನ ದಿನಗಳಲ್ಲಿ ಪತ್ರಿಕೆಯ ಜನಪ್ರೀಯತೆಗಳನ್ನು ಮತ್ತಷ್ಟು ಹೆಚ್ಚಿಸುವ ದೃಷ್ಟಿಯಿಂದ ಹುಬ್ಬಳ್ಳಿಯ ಗಾಮನಗಟ್ಟಿ ಕೈಗಾರಿಕಾ ಪ್ರದೇಶದಲ್ಲಿ ಭೂಮಿ ಖರೀದಿಸಲಾಗಿದ್ದು, ನೂತನ ಮುದ್ರಣಾಲಯ ಸ್ಥಾಪಿಸುವುದರ ಜೊತೆಗೆ ಕೌಶಲ್ಯಾಭಿವೃದ್ಧಿ ಕೇಂದ್ರ ಸ್ಥಾಪಿಸುವ ಗುರಿ ಹೊಂದಲಾಗಿದೆ. ಇದಕ್ಕಾಗಿಯೇ ಕೆಐಎಡಿಬಿ ಜಾಗೆಯನ್ನೂ ಮಂಜೂರು ಮಾಡಿದೆ. ಭಾಷೆಯ ಅಭಿವೃದ್ಧಿಗೆ ಪತ್ರಿಕೆಗಳ ಸಹಕಾರ ಅಗತ್ಯ ಎಂದು ಅರಿತಿರುವ ರಾಜ್ಯ ಸರ್ಕಾರ ಸಾಕಷ್ಟು ಸಹಕಾರ ನೀಡಿದೆ. ರಾಜ್ಯ ಸರ್ಕಾರದ ಸಹಕಾರದಿಂದ ಪತ್ರಿಕೆಯನ್ನು ಮನೆ ಮನೆಗೆ ತಲುಪಿಸುವ ಜವಾಬ್ದಾರಿ ನಮ್ಮದು. ಆದರೆ, ಅದನ್ನು ಬೆಳೆಸಿ, ಪೋಷಿಸುವುದು ಓದುಗರ ಜವಾಬ್ದಾರಿ ಎಂದರು.
ಇಂದಿನ ಯುವ ಸಮುದಾಯ ಕನ್ನಡದಿಂದ ವಿಮುಖವಾಗುತ್ತಿದೆ. ಅನ್ಯ ಭಾಷೆಗಳನ್ನು ಕಲಿಯುವುದರಲ್ಲಿ ತಪ್ಪಿಲ್ಲ. ಆದರೆ, ಕನ್ನಡ ಓದುವುದನ್ನು ಬಿಡಬಾರದು. ಸರ್ಕಾರವೂ ಈ ನಿಟ್ಟಿನಲ್ಲಿ ಸಹಕಾರ ನೀಡಬೇಕು. ಲಾಭದ ಉದ್ದೇಶದಿಂದ ಪತ್ರಿಕೆಯನ್ನು ತಯಾರುಮಾಡದ ಲೋಕ ಶಿಕ್ಷಣ ಟ್ರಸ್ಟ್, ಧಾರ್ಮಿಕ ದತ್ತಿ ಅಡಿಯಲ್ಲಿ ಮತ್ತು ಅನೇಕ ಮಹನೀಯರ ಸಹಕಾರ, ಪರಿಶ್ರಮದಿಂದ ಸಂಯುಕ್ತ ಕರ್ನಾಟಕ ಪತ್ರಿಕೆಯನ್ನು ಕಟ್ಟಿ ಬೆಳೆಸಿದೆ ಎಂದು ವಿವರಿಸಿದರು.