ಕೋವಿಡ್ ಹಗರಣ, ೪೦ ಪರ್ಸಂಟೇಜ್ ತನಿಖೆ

0
19

ಬಳ್ಳಾರಿ: ಬಿಜೆಪಿ ಸರಕಾರ ಅವಧಿಯಲ್ಲಿ ನಡೆದ ಕೋವಿಡ್ ೧೯ ಮತ್ತು‌ ಶೇ.೪೦ ಪರ್ಸಂಟೇಜ್ ಭ್ರಷ್ಟಾಚಾರದ ತನಿಖೆ ಕೈಗೊಳ್ಳುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಸಂಡೂರಿನ ಯಶವಂತ ನಗರದಲ್ಲಿ ನಡೆದ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದರು. ನನ್ನ ೪೦ ವರ್ಷದ ರಾಜಕೀಯ ಜೀವನದಲ್ಲಿ ಒಂದು ಕಳಂಕವೂ ಇಲ್ಲ ಆದರೂ ಬಿಜೆಪಿ ಸುಳ್ಳು ಕೇಸ್ ಹಾಕಿಸಿದೆ. ಅವರ ಅಧಿಕಾ‌ರ ಅವಧಿಯಲ್ಲಿ ನಡೆದ ಎಲ್ಲ ಹಗರಣಗಳ‌ ತನಿಖೆ ಮಾಡಿಸುವೆ ಎಂದರು. ಬಿಜೆಪಿ ಷಡ್ಯಂತ್ರಕ್ಕೆ ತಕ್ಕ ಉತ್ತರ ಕೊಡಲು ಸಂಡೂರಿನಲ್ಲಿ ಅನ್ನಪೂರ್ಣಮ್ಮ ಗೆಲ್ಲಬೇಕು. ಮೂರೂ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲೂ ನಾವು ಗೆದ್ದೇ ಗೆಲ್ತೀವಿ. ಯಶವಂತಪುರದ ಪುತ್ರ ಈ.ತುಕಾರಾಮ್ ಲೋಕಸಭಾ ಸದಸ್ಯರಾಗಿದ್ದಾರೆ. ಈಗ ಈ ಊರಿನ ಸೊಸೆ ಅನ್ನಪೂರ್ಣಮ್ಮ ಅವರನ್ನೂ ಗೆಲ್ಲಿಸಿ. ಈ.ತುಕಾರಾಮ್ ಅಭಿವೃದ್ಧಿಯಲ್ಲಿ ನಿಸ್ಸೀಮ. ನನ್ನಿಂದ, ಎಲ್ಲಾ ಮಂತ್ರಿಗಳಿಂದ ಸಜ್ಜನಿಕೆಯಿಂದಲೇ ಕೆಲಸ ಮಾಡಿಸಿಕೊಳ್ಳುವ ಕಲೆ, ಕಾಳಜಿ ಈ.ತುಕಾರಾಮ್ ಅವರಿಗೆ ಇದೆ, ಈಗ ಅನ್ನಪೂರ್ಣಮ್ಮ ಅವರನ್ನೂ ಸೇರಿಸಿಕೊಂಡು ಅಭಿವೃದ್ಧಿ ಹೆಚ್ಚಾಗಿ ಆಗುತ್ತದೆ‌. ನಮ್ಮ ಸರ್ಕಾರ ಎಲ್ಲಾ ಜಾತಿ, ಎಲ್ಲಾ ಧರ್ಮದ ಮಹಿಳೆಯರಿಗೂ ಉಚಿತವಾದ ಶಕ್ತಿ, ಗೃಹಲಕ್ಷ್ಮಿ ಯೋಜನೆ ಜಾರಿ ಮಾಡಿದ್ದೇವೆ. ಯಶಸ್ವಿಯಾಗಿ ನಮ್ಮ ಗ್ಯಾರಂಟಿಗಳು ನಡೆಯುತ್ತಿವೆ. ನಾವು ನಾಲ್ಕೂವರೆ ಲಕ್ಷ ಕೋಟಿ ತೆರಿಗೆ ಕಟ್ತೀವಿ. ನಮಗೆ ವಾಪಾಸ್ ಬರೋದು ಒಂದು ರೂಪಾಯಿಗೆ 15 ಪೈಸೆ ಮಾತ್ರ.ಐದನೇ ವೇತನ ಆಯೋಗ, ತುಂಗಾ ಮೇಲ್ದಂಡೆ, ಬರ ಪರಿಹಾರದಲ್ಲೂ ರಾಜ್ಯಕ್ಕೆ ಅನ್ಯಾಯ ಮಾಡಿದರು.‌ ನಾವು ಸುಪ್ರೀಂಕೋರ್ಟ್ ಗೆ ಹೋಗಿ ಬರ ಪರಿಹಾರ ತಂದೆವು. ನಮ್ಮ ಪಾಲಿನ ತೆರಿಗೆ ಹಣ ಕೊಡುವುದನ್ನು ನಿಲ್ಲಿಸಿದರೆ ಗ್ಯಾರಂಟಿಗಳನ್ನು ನಿಲ್ಲಿಸಿ ಬಿಡ್ತಾರೆ ಅಂತ ಕೇಂದ್ರ ತೊಂದರೆ ಕೊಡುತ್ತಿದೆ. ಆದರೆ ನಾವು 56 ಸಾವಿರ ಕೋಟಿ ಹಣವನ್ನು ಗ್ಯಾರಂಟಿಗಳಿಗೆ ಖರ್ಚು ಮಾಡುತ್ತಲೇ ಇದ್ದೇವೆ. ಒಂದು ಲಕ್ಷ ಇಪ್ಪತ್ತು ಸಾವಿರ ಕೋಟಿ ಹಣವನ್ನು ಅಭಿವೃದ್ಧಿ ಕೆಲಸಗಳಿಗೆ ಕೊಡುತ್ತಿದ್ದೇವೆ. ಆದ್ದರಿಂದ ಬಿಜೆಪಿಯವರ ಹಸಿ ಹಸಿ ಸುಳ್ಳುಗಳಿಗೆ ಮರುಳಾಗಬೇಡಿ. ಕಾಂಗ್ರೆಸ್ಸಿಗೆ ಮತ ನೀಡಿ ಎಂದರು.

ನನ್ನ ಜಿಗರಿ ದೋಸ್ತ್‌ನ ಮಗಳು ಅನ್ನಪೂರ್ಣಮ್ಮ ಅವರನ್ನು ನೀವು ಗೆಲ್ಲಿಸಲೇಬೇಕು. ಈ.ತುಕಾರಾಮ್ ಅವರ ಖಾಲಿ ಜಾಗವನ್ನು ಅನ್ನಪೂರ್ಣಮ್ಮ ಭರ್ತಿ ಮಾಡಬೇಕು ಅನ್ನಪೂರ್ಣಮ್ಮ ಅವರು ಗೆದ್ದರೆ ನಾನೇ ಗೆದ್ದ ಹಾಗೆ. ಈ ಗೆಲುವಿನಿಂದ ನನಗೆ ಶಕ್ತಿ ಬರುತ್ತದೆ.
ನಾನು ಮಂತ್ರಿಯಾಗಿ 40 ವರ್ಷ ಆಯ್ತು. ಸಣ್ಣ ಕಳಂಕವೂ ನನ್ನ ಮೇಲಿಲ್ಲ. ಆದರೆ ಸುಳ್ಳು ಕೇಸು ಹಾಕಿಸಿದ್ದಾರೆ. ಈ ಬಿಜೆಪಿಯವರಿಗೆ ಪಾಠ ಕಲಿಸಿ ಎಂದರು.

Previous articleವಿದ್ವಾಂಸ ರಾಮಪ್ರಸಾದ್, ವಿದುಷಿ ನಳಿನಾ ಮೋಹನ್‌ಗೆ ಸುಸ್ವರಲಯ ಪ್ರಶಸ್ತಿ ಘೋಷಣೆ
Next articleಸಿದ್ದರಾಮೇಶ್ವರ ವಿರಕ್ತಮಠಕ್ಕೆ ಸಿಎಂ ಸಿದ್ದರಾಮಯ್ಯ ‌ಭೇಟಿ