ಕೋರ್ಟ್‌ ಆದೇಶ ಉಲ್ಲಂಘಿಸಿ ಕಸಾಪ ಬಗ್ಗೆ ಅಪಪ್ರಚಾರ

0
20

ಮಂಗಳೂರು: ಹಿರಿಯ ಸಾಹಿತಿ ಹಂ.ಪ.ನಾಗರಾಜಯ್ಯ ಅವರು ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷರಾಗಿದ್ದಾಗ ಪರಿಷತ್‌ನಲ್ಲಿ ಅಕ್ರಮ ಎಸಗಿ ಆಡಳಿತಾಧಿಕಾರಿ ನೇಮಕಕ್ಕೆ ಕಾರಣವಾಗಿದ್ದರು. ಅವರಿಂದಲೇ ಪರಿಷತ್‌ಗೆ ಉಂಟಾದ ನಷ್ಟವನ್ನು ಭರಿಸುವಂತೆ ಹಗರಣಗಳ ತನಿಖೆ ನಡೆಸಿದ ನ್ಯಾಯಮೂರ್ತಿ ಶ್ಯಾಮಸುಂದರ್‌ ನೇತೃತ್ವದ ಸಮಿತಿ ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಹಂಪನಾ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವ ಬಗ್ಗೆ ಪರಿಷತ್‌ ಚಿಂತನೆ ನಡೆಸಲಿದೆ ಎಂದು ಕನ್ನಡ ಸಾಹಿತ್ಯ ಪರಿಷತ್‌ ಹಾಲಿ ಅಧ್ಯಕ್ಷ ನಾಡೋಜ ಡಾ.ಮಹೇಶ್‌ ಜೋಶಿ
ಹೇಳಿದ್ದಾರೆ.
ಮಂಗಳೂರಿನ ಸರ್ಕ್ಯೂಟ್‌ ಹೌಸ್‌ನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 1987ರಲ್ಲಿ ಕಸಾಪ ಅಧ್ಯಕ್ಷರಾಗಿದ್ದ ಹಂಪನಾ ವಿರುದ್ಧ ಅಕ್ರಮಗಳ ಆರೋಪ ಕೇಳಿಬಂದಿತ್ತು. ಈ ಬಗ್ಗೆ ತನಿಖೆ ನಡೆಸಿದ ಸಮಿತಿಯ ಶಿಫಾರಸಿನಂತೆ ಆಡಳಿತಾಧಿಕಾರಿಗಳ ನೇಮಕ ಮಾಡಲಾಗಿತ್ತು. ಅಲ್ಲದೆ ಅವರ ವಿರುದ್ಧದ ಆರೋಪ ತನಿಖೆಯಲ್ಲಿ ಸಾಬೀತಾದ ಕಾರಣ ಪರಿಷತ್ತಿಗೆ ಆದ ನಷ್ಟವನ್ನು ಅವರಿಂದಲೇ ಭರ್ತಿ ಮಾಡಿ ಕ್ರಿಮಿನಲ್‌ ಕೇಸು ದಾಖಲಿಸುವಂತೆ ಕೋರ್ಟ್‌ ಆದೇಶಿಸಿತ್ತು. ಆದರೆ ನಂತರ ಬಂದ ಪರಿಷತ್‌ನ ಅಧ್ಯಕ್ಷರುಗಳಿಗೆ ಇಂತಹ ಆದೇಶ ಇರುವ ಬಗ್ಗೆ ಗಮನಕ್ಕೆ ಬಂದಿರಲಿಲ್ಲ ಎಂದರು.
ಆಡಳಿತಾಧಿಕಾರಿ ನೇಮಕಕ್ಕೆ ಕಾರಣರಾದ ಹಂಪನಾ ಅವರೇ ಈಗ ಮುಖ್ಯಮಂತ್ರಿಗಳಿಗೆ ಆಡಳಿತಾಧಿಕಾರಿ ನೇಮಿಸುವಂತೆ ಆಗ್ರಹಿಸುತ್ತಿರುವುದು ವಿಪರ್ಯಾಸ. ಹಂಪನಾ ವಿರುದ್ಧ ಕ್ರಮಕ್ಕೆ ಕಾನೂನು ಸಲಹೆ ಪಡೆದು, ಕಸಾಪ ಕಾರ್ಯಕಾರಿ ಸಮಿತಿಯಲ್ಲಿ ಚರ್ಚಿಸಿ ನಿರ್ಧರಿಸಲಾಗುವುದು. ಈ ವಿಚಾರವನ್ನು ಮುಖ್ಯಮಂತ್ರಿಗಳ ಗಮನಕ್ಕೂ ತರಲಾಗುವುದು ಎಂದು ಡಾ.ಮಹೇಶ್‌ ಜೋಶಿ ಸ್ಪಷ್ಟಪಡಿಸಿದರು. ಮಂಡ್ಯದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಲೆಕ್ಕಪತ್ರ ನೀಡಿಲ್ಲ ಎಂದು ಸಿಎಂ ಅವರನ್ನು ಭೇಟಿ ಮಾಡಿದ ಹಂಪನಾ ನಿಯೋಗ ಆರೋಪಿಸಿದೆ. ಇಂತಹ ಸಾಹಿತ್ಯ ಸಮ್ಮೇಳನಗಳ ಲೆಕ್ಕಪತ್ರದ ಜವಾಬ್ದಾರಿಯನ್ನು ನಿರ್ವಹಿಸುವುದು ಆತಿಥ್ಯ ಪಡೆದ ಜಿಲ್ಲೆಯ ಉಸ್ತುವಾರಿ ಸಚಿವರ ನೇತೃತ್ವದ ಸಮ್ಮೇಳನದ ಸ್ವಾಗತ ಸಮಿತಿ. ಈ ಸಮಿತಿ ಕಸಾಪಗೆ ಲೆಕ್ಕಪತ್ರ ಒಪ್ಪಿಸಿದ ಬಳಿಕ ಇಳಿಕೆಯಾದರೆ ಆ ಮೊತ್ತವನ್ನು ಅತಿಥೇಯ ಜಿಲ್ಲೆಗೆ ಮರಳಿಸುವುದು ಕ್ರಮ. ಇಂತಹ ವಿಚಾರವನ್ನೂ ಅರಿತುಕೊಳ್ಳದೆ ವಿನಾ ಕಾರಣ ನಿಯೋಗದ ಕಸಾಪ ಬಗ್ಗೆ ದೋಷಾರೋಪ ಮಾಡುತ್ತಿದೆ ಎಂದರು. ಕಸಾಪ ವಿರುದ್ಧ ಸಲ್ಲದ, ದಾಖಲೆ ರಹಿತ ಆರೋಪ ಮಾಡುತ್ತಿರುವ ಬೆಂಗಳೂರಿನ ಸಮಾನ ಮನಸ್ಕರ
ವೇದಿಕೆ ಹಾಗೂ ಅದರಲ್ಲಿ ಇರುವವರ ವಿರುದ್ಧ ಕೋರ್ಟ್‌ನಿಂದ 2023ರಲ್ಲೇ ಇನ್‌ಜೆಂಕ್ಷನ್‌ ಆದೇಶ ತರಲಾಗಿದೆ. ಹೀಗಿದ್ದೂ ಕೋರ್ಟ್‌ ಆದೇಶ ಉಲ್ಲಂಘಿಸಿ ಕಸಾಪ ಬಗ್ಗೆ ಅಪಪ್ರಚಾರ ನಡೆಸುತ್ತಿದ್ದಾರೆ. ಇದರ ವಿರುದ್ಧ ಕೋರ್ಟ್‌ ಆದೇಶ ಉಲ್ಲಂಘನೆ ಅಪೀಲು ಸಲ್ಲಿಸಲಾಗುವುದು ಎಂದು ಡಾ.ಮಹೇಶ್‌ ಜೋಶಿ ತಿಳಿಸಿದರು. ಕಸಾಪ ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯ ಡಾ.ಮಾಧವ ಎಂ.ಕೆ, ಕಸಾಪ ದ.ಕ. ಜಿಲ್ಲಾಧ್ಯಕ್ಷ ಡಾ.ಶ್ರೀನಾಥ್‌ ಎಂ.ಪಿ. ಇದ್ದರು.

Previous articleಕುಡುಪು ಕೊಲೆ: ಸುಳ್ಳು ಸುದ್ದಿ ಹರಡಿಸಿದವರ ವಿರುದ್ಧ ಪ್ರಕರಣ
Next articleಕೊಟ್ಟಿಗೆಗೆ ನುಗ್ಗಿದ ಚಿರತೆ : ಕುರಿ ಮೇಕೆಗಳ ಮೇಲೆ ದಾಳಿ.