ಹುಲಿರಾಯನ ಕಥೆಯನ್ನು ಕೇಳಿಯಾದರೂ ಮೃಗೀಯ ವರ್ತನೆ ತೋರುತ್ತಿರುವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಿ
ಬೆಂಗಳೂರು: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದಲೂ ಗೋ ಸುರಕ್ಷತೆಯ ಬಗ್ಗೆ ತಾತ್ಸಾರ ಧೋರಣೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು ಗೋ ರಕ್ಷಣೆ, ಈ ನೆಲದ ಮಾನವ ಧರ್ಮದ ರಕ್ಷಣೆ, ಈ ನೆಲದ ಸಂಸ್ಕೃತಿಯ ರಕ್ಷಣೆ, ಕೋಟ್ಯಂತರ ಜನರ ಭಾವನೆಯ ರಕ್ಷಣೆ ಎಂದು ಪೂಜಿಸುವ ನಮ್ಮ ಕನ್ನಡ ನಾಡಿನಲ್ಲಿ ಇತ್ತೀಚೆಗೆ ಬೆಂಗಳೂರಿನ ಚಾಮರಾಜಪೇಟೆಯಲ್ಲಿ ರಾಕ್ಷಸಿ ಮನಸ್ಥಿತಿಯ ಪಾಪಿಗಳು ನಿರ್ದಯವಾಗಿ ಹಸುಗಳ ಕೆಚ್ಚಲನ್ನು ಭೀಕರವಾಗಿ ಕತ್ತರಿಸಿದ್ದ ಅಮಾನುಷ ಕೃತ್ಯ, ಬಳಿಕ ನಂಜನಗೂಡಿನಲ್ಲಿ ಆಕಳ ಬಾಲ ಕತ್ತಿರಿಸಿ ವಿಕೃತಿ ಮೆರೆದಿದ್ದರು, ಇದೀಗ ಹೊನ್ನಾವರದಲ್ಲಿ ಹಸುವಿನ ರುಂಡ, ಕಾಲು ಕತ್ತರಿಸಿರುವ ಘಟನೆ ಅತ್ಯಂತ ಹೇಯ ದುರ್ಘಟನೆಯಾಗಿದೆ.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದಲೂ ಗೋ ಸುರಕ್ಷತೆಯ ತಾತ್ಸಾರ ಧೋರಣೆ, ಓಲೈಕೆ ರಾಜಕಾರಣದ ನಿಲುವಿನಿಂದಾಗಿ ಗೋ ಭಕ್ಷಕರಿಗೆ ಕಾನೂನಿನ ಭಯವಿಲ್ಲದಂತಾಗಿದೆ. ಪದೇ ಪದೇ ನಮ್ಮ ಸಂಸ್ಕೃತಿ ಪರಂಪರೆಯ ಮೇಲೆ ನಡೆಯುತ್ತಿರುವ ದಾಳಿಯನ್ನು ನಾಡಿನ ಜನ ಸಹಿಸಿಕೊಂಡು ಕೂರುವುದಿಲ್ಲ. ಸರ್ಕಾರ ಈ ರೀತಿಯ ಸರಣೀ ರಾಕ್ಷಾಸಿ ಕೃತ್ಯ ಎಸಗುತ್ತಿರುವವರನ್ನು ಹಾಗೂ ಇದರ ಹಿಂದಿರುವ ದುಷ್ಟಶಕ್ತಿಗಳನ್ನು ಶಿಕ್ಷಿಸಲು ಜರೂರು ಕ್ರಮ ಕೈಗೊಳ್ಳದಿದ್ದರೆ ಕರ್ನಾಟಕ ಬಿಜೆಪಿ ಹೋರಾಟಕ್ಕಿಳಿಯಲಿದೆ.
ಪುಣ್ಯಕೋಟಿಯ ನಿಷ್ಠೆ, ನ್ಯಾಯ, ಧರ್ಮದ ನಡೆಗೆ ತಲೆಬಾಗಿದ ಹುಲಿರಾಯನೇ ಆತ್ಮಾರ್ಪಣೆ ಮಾಡಿಕೊಂಡ ಕಥೆ ಹೇಳುವ ನಾಡು ನಮ್ಮದು. ಕರ್ನಾಟಕ ಕಾಂಗ್ರೆಸ್ ಸರ್ಕಾರ ಹುಲಿರಾಯನ ಕಥೆಯನ್ನು ಕೇಳಿಯಾದರೂ ಮೃಗೀಯ ವರ್ತನೆ ತೋರುತ್ತಿರುವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಿ ಎಂದು ಆಗ್ರಹಿಸುವೆ ಎಂದಿದ್ದಾರೆ.