ಕೊಲೆಗೆ ಕಾರಣವಾಯಿತೇ ಮಾಟ-ಮಂತ್ರ, ವಶೀಕರಣ…?

0
11

ಹರ್ಷ ಕುಲಕರ್ಣಿ
ಹುಬ್ಬಳ್ಳಿ: ನವನಗರದ ಈಶ್ವರ ನಗರದಲ್ಲಿರುವ ದಕ್ಷಿಣ ವೈಷ್ಣೋದೇವಿ ದೇವಸ್ಥಾನದ ಧರ್ಮದರ್ಶಿ ದೇವೇಂದ್ರಪ್ಪ ಮಹಾದೇವಪ್ಪ ವನಹಳ್ಳಿ (ದೇವಪ್ಪಜ್ಜ) ಕೊಲೆ ಪ್ರಕರಣ ಸಾಕಷ್ಟು ಕುತೂಹಲ ಮೂಡಿಸಿದೆ. ಆಸ್ತಿ-ಹಣದ ವಿಚಾರಕ್ಕೆ ಕೊಲೆಯಾಗಿರಬಹುದು ಎಂಬುದು ಹಲವರ ವಾದವಾದರೆ, ಮಾಟ-ಮಂತ್ರ, ವಶೀಕರಣವೇ ಹತ್ಯೆಗೆ ಕಾರಣ ಎಂಬುದು ಪೊಲೀಸರ ಅನುಮಾನ.
ಹುಬ್ಬಳ್ಳಿ ತಾಲೂಕಿನ ಕುಸುಗಲ್ ಮೂಲದವರಾದ ದೇವಪ್ಪಜ್ಜ, ನವನಗರದ ಈಶ್ವರ ನಗರದಲ್ಲಿ ದಕ್ಷಿಣ ವೈಷ್ಣೋದೇವಿ ದೇವಸ್ಥಾನ ನಿರ್ಮಾಣವಾಗುವ ಮೊದಲು ಧಾರವಾಡದ ಬಳಿಯ ನರೇಂದ್ರ ಗ್ರಾಮದಲ್ಲಿನ ಯಲ್ಲಮ್ಮ ದೇವಿ ದೇವಸ್ಥಾನದಲ್ಲಿ ಪೂಜೆ ಮಾಡುತ್ತಿದ್ದರು. ಬಳಿಕ ಈಶ್ವರ ನಗರದಲ್ಲಿ ದಕ್ಷಿಣ ವೈಷ್ಣೋದೇವಿ ದೇವಸ್ಥಾನ ನಿರ್ಮಾಣವಾದಾಗಿನಿಂದ ಅಲ್ಲಿಯೇ ಪೂಜೆ ಪುನಸ್ಕಾರದ ಮಾಡಿಕೊಂಡಿದ್ದರು. ಪೂಜೆಯೊಟ್ಟಿಗೆ ಹೇಳಿಕೆ (ಜ್ಯೋತಿಷ್ಯ) ಯನ್ನೂ ಹೇಳುತ್ತಿದ್ದರು.
ದಿನ ಕಳೆದಂತೆ ದೇವಪ್ಪಜ್ಜನ ಹೇಳಿಕೆಯ ಖ್ಯಾತಿ ಹಬ್ಬತೊಡಗಿತು. ಮನೆಯಲ್ಲಿ ಕಿರಿಕಿರಿ, ಕುಟುಂಬ ಕಲಹ, ಶತ್ರು ಬಾಧೆ, ಸ್ತ್ರೀ ವಶೀಕರಣ, ಪುರುಷ ವಶೀಕರಣ, ಆಸ್ತಿ ವಿವಾದ, ಹಠಾತ್ ಅನಾರೋಗ್ಯ, ಎಷ್ಟೇ ಔಷಧಿಗಳನ್ನು ತೆಗೆದುಕೊಂಡರೂ ಅನಾರೋಗ್ಯ ಸರಿ ಹೋಗದಿರುವುದು ಹಾಗೂ ಭೂತ ಬಾಧೆಗಳ ಸಮಸ್ಯೆಗಳನ್ನು ಅನುಭವಿಸುತ್ತಿರುವವರು ಪರಿಹಾರಕ್ಕಾಗಿ ದೇವಪ್ಪಜ್ಜನ ಬಳಿ ಬಂದು ಪರಿಹಾರ ಕಂಡುಕೊಳ್ಳುತ್ತಿದ್ದರು. ಅವರನ್ನು ಎದುರು ಕೂಡಿಸಿಕೊಂಡು ಮಂತ್ರ ಹೇಳಿ, ಲಿಂಬೆಹಣ್ಣನ್ನು ದೇವಪ್ಪಜ್ಜ ನೀಡುತ್ತಿದ್ದರು. ಅಮಾವಾಸ್ಯೆ, ಹುಣ್ಣಿಮೆಯಂದು ಮತ್ತೆ ಬರುವಂತೆ ಹೇಳಿ ಕಳಿಸುತ್ತಿದ್ದರು.
ಲಿಂಬೆಹಣ್ಣಿನಿಂದ ಸಮಸ್ಯೆ ಪರಿಹಾರ ಆಗುತ್ತಿತ್ತೊ ಬಿಡುತ್ತಿತ್ತೊ ಗೊತ್ತಿಲ್ಲ. ಆದರೆ ಒಂದು ನಂಬಿಕೆಯಿಂದ ಜನ ಇಲ್ಲಿಗೆ ಬರುತ್ತಿದ್ದರು. ರಾಜ್ಯ ಸೇರಿದಂತೆ ನೆರೆ ರಾಜ್ಯದಲ್ಲೂ ದೇವಪ್ಪಜ್ಜ ಪ್ರಖ್ಯಾತಿಯನ್ನು ಪಡೆದಿದ್ದ. ಸಹಜವಾಗಿಯೇ ದೇವಪ್ಪಜ್ಜನನ್ನು ಭಕ್ತರು ಗುರುವಿನ ರೂಪದಲ್ಲಿ ಕಾಣುತ್ತಿದ್ದರು. ಈ ಅರ್ಥದಲ್ಲಿ ದೇವಪ್ಪಜ್ಜನಿಗೆ ಶತ್ರುಗಳೇ ಇರಲಿಲ್ಲ. ಹೀಗಾಗಿ ಈತನಿಂದ ಕೆಡುಕನ್ನು ಅನುಭವಿಸಿದವರೇ ದೇವಪ್ಪಜ್ಜನ ಕೊಲೆ ಮಾಡಿರಬಹುದು ಎಂಬ ಸಂದೇಹ ಪೊಲೀಸರನ್ನು ಆವರಿಸಿಕೊಂಡಿದೆ.
ದೇವಪ್ಪಜ್ಜನ ಪತ್ನಿ ಕಿಮ್ಸ್ ಆಸ್ಪತ್ರೆಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪುತ್ರ ಅಮೇರಿಕಾದ ಖಾಸಗಿ ಕಂಪನಿಯ ಉದ್ಯೋಗಿ. ಪತ್ನಿ ಮತ್ತು ಮಗ ಉನ್ನತ ಸ್ಥಾನದಲ್ಲಿರುವುದರಿಂದ ಹಣಕಾಸಿಗೇನೂ ತೊಂದರೆ ಇರಲಿಲ್ಲ. ಹೀಗಾಗಿ ವಾಮಾಚಾರ ಪ್ರಯೋಗ ಮಾಡದಂತೆ ದೇವಪ್ಪಜ್ಜನಿಗೆ ಕುಟುಂಬಸ್ಥರೂ ತಿಳಿ ಹೇಳುತ್ತಿದ್ದರು. ಅವರ ಮಾತಿಗೆ ರೇಗುತ್ತಿದ್ದ ದೇವಪ್ಪಜ್ಜ, ಅವರೊಟ್ಟಿಗೆ ಜಗಳ ಮಾಡಿ ೨-೩ ದಿನ ಮನೆಗೆ ಹೋಗದೇ ದೇವಸ್ಥಾನದಲ್ಲೇ ಉಳಿದುಕೊಂಡ ಉದಾಹರಣೆಗಳೂ ಇವೆ.
ದೇವಪ್ಪಜ್ಜನ ಅತಿಯಾದ ಮೂಢ ನಂಬಿಕೆಯೇ ಕೊಲೆಗೆ ಕಾರಣವಾಗಿರಬಹುದು. ಈತನಿಂದ ವಾಮಾಚಾರಕ್ಕೆ ಒಳಗಾದವರು, ಹಣ ಪಡೆದೂ ಕೆಲಸ ಮಾಡಿಕೊಡದಿರುವುದು, ಲಿಂಬೆ ಹಣ್ಣಿನ ಪ್ರಭಾವದಿಂದ ಪ್ರೀತಿ ಪಾತ್ರರನ್ನು ಕಳೆದುಕೊಂಡವರೇ ಕೊಲೆ ಮಾಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಸಹಜವಾಗಿ ಕೊಲೆ ದರೋಡೆ ನಡೆದಾಗ ೩-೪ ಜನ ಸೇರಿಕೊಂಡು ಸಂಚು ರೂಪಿಸುವುದುಂಟು. ಆದರೆ ದೇವಪ್ಪಜ್ಜನ ಕೊಲೆಯ ಹಿಂದೆ ಒಬ್ಬನೇ ವ್ಯಕ್ತಿ ಇರುವುದು ಸ್ಪಷ್ಟವಾಗಿದೆ. ಪೊಲೀಸರ ಹೆಚ್ಚಿನ ತನಿಖೆ ಇಂದಷ್ಟೇ ಸತ್ಯಾಸತ್ಯತೆಗಳು ಹೊರ ಬರಬೇಕಿದೆ.

ದೊಡ್ಡ ದೊಡ್ಡವರೇ ತಲೆ ಬಾಗಿದ್ದರು…
ಕೊಲೆಯಾಗಿರುವ ದೇವಪ್ಪಜ್ಜ ಅಪ್ಪಟ ಕನ್ನಡ ಅಭಿಮಾನಿ. ದೇವಪ್ಪಜ್ಜ ಅವರಿಂದ ಆಂಗ್ಲ ಪದಗಳನ್ನು ನುಡಿಸುವಲ್ಲಿ ಮಾಜಿ ಸಂಸದ ಪ್ರೊ. ಐ.ಜಿ. ಸನದಿ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಸಂಸದ ಜಗದೀಶ ಶೆಟ್ಟರ್, ಮಾತೆ ಮಹಾದೇವಿ, ಚನ್ನವೀರ ಕಣವಿ, ಚಂದ್ರಕಾಂತ ಬೆಲ್ಲದ, ದಿ.ಸಿ.ಎಸ್. ಶಿವಳ್ಳಿ, ಖುಷಂತ್ ಸಿಂಗ್, ರಾಮಕೃಷ್ಣ ಹೆಗಡೆ, ಎಂ.ಪಿ. ಪ್ರಕಾಶ, ಪಾಟೀಲ ಪುಟ್ಟಪ್ಪ ಹೀಗೆ ಅನೇಕರು ಅಜ್ಜನಿಂದ ಆಂಗ್ಲ ಪದ ನುಡಿಸಲಾಗದೆ ಸೋಲೊಪ್ಪಿಕೊಂಡಿದ್ದರು. ದೇವಪ್ಪಜ್ಜ ಅವರಿಂದ ಆಂಗ್ಲ ಪದ ನುಡಿಸಲು ೨೦೦೬-೦೭ರ ನವೆಂಬರ್‌ನಲ್ಲಿ ೧ ಕೋಟಿ ಬಹುಮಾನ ಮೊತ್ತ ನಿಗದಿ ಮಾಡಿದ್ದರೂ, ಅವರನ್ನು ಸೋಲಿಸಲು ಸಾಧ್ಯವಾಗಿರಲಿಲ್ಲ.

Previous articleಸ್ತನ ಕ್ಯಾನ್ಸರ್: ಜಗತ್ತಿನಲ್ಲಿ ಭಾರತಕ್ಕೆ ಪ್ರಥಮ ಸ್ಥಾನ
Next articleಶಿರೂರು ಗುಡ್ಡ ಕುಸಿತ ಪ್ರಕರಣ: 8 ದಿನಗಳ ಬಳಿಕ ಪತ್ತೆಯಾದ ಸಣ್ಣಿ ಗೌಡ ಮೃತದೇಹ