ಹುಬ್ಬಳ್ಳಿ: ಕೆಲ ನಾಯಕರು ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಶನಿವಾರ ಕರ್ನಾಟಕ ಬಂದ್ ಕರೆ ನೀಡಿದ್ದಾರೆ. ಬೇಡಿಕೆ ಸಮಂಜಸವಾಗಿದ್ದರೆ ಎಲ್ಲರೂ ಬೆಂಬಲ ಸೂಚಿಸುತ್ತಿದ್ದರು ಎಂದು ನಟ ಹಾಗೂ ಹೋರಾಟಗಾರ ಚೇತನ್ ಅಹಿಂಸಾ ಹೇಳಿದರು.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಡು ನುಡಿಗಾಗಿ ಹೋರಾಟ ಮಾಡಬೇಕು. ಕರ್ನಾಟಕದ ಪರವಾಗಿ ಇರುವಂತಹ ಹೋರಾಟಕ್ಕೆ ನಾನು ಎಂದಿಗೂ ಸಿದ್ಧ. ಆದರೆ, ಶನಿವಾರದ ಬಂದ್‌ಗೆ ತೂಕ ಇದೆ ಎನ್ನಿಸುತ್ತಿಲ್ಲ. ಹೀಗಾಗಿ ನಾನೂ ಬೆಂಬಲ ನೀಡುವುದಿಲ್ಲ ಎಂದರು.
ವಿದ್ಯುತ್ ಬಿಲ್ ಏರಿಕೆ ವಿಚಾರವಾಗಿ ಕಿಡಿ ಕಾರಿದ ಚೇತನ, ಪ್ರತಿಯೊಂದು ಸರ್ಕಾರ ಆಡಳಿತಕ್ಕೆ ಬಂದಾಗಲೂ ತೆರಿಗೆ ಹೆಚ್ಚಳ ಸಾಮಾನ್ಯ. ಜನರಿಂದ ತೆರಿಗೆ ಸಂಗ್ರಹಿಸಿ, ಒಳ್ಳೆಯ ಕೆಲಸಗಳಿಗೆ ಬಳಸುವುದು ಸರ್ಕಾರದ ಕರ್ತವ್ಯ. ಆದರೆ, ಯಾವುದರ ಮೇಲೆ ತೆರಿಗೆ ಹಾಕಬೇಕು ಎಂಬುದು ಬಹಳ ಮುಖ್ಯ. ಬಸ್ ದರ, ನಂದಿನಿ ಹಾಲು, ಮೆಟ್ರೋ, ಜಿಎಸ್‌ಟಿ ಇವೆಲ್ಲವೂ ಕೂಡ ಜನ ವಿರೋಧಿ ತೆರಿಗೆಗಳು. ಯಾರ ಮೇಲೆ ಟ್ಯಾಕ್ಸ್ ಹಾಕಬೇಕೋ ಅವರಿಗೇ ಚುನಾವಣೆಯ ಟಿಕೆಟ್ ನೀಡಿದರೆ, ಅಂಥವರಿಂದ ತೆರಿಗೆ ವಸೂಲಿ ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಟ್ಟು-ಬೋಲ್ಟ್ ಟೈಟ್ ಹೇಳಿಕೆಗೆ ತಿರುಗೇಟು ನೀಡಿದ ಅವರು, ನಿಮ್ಮ ಹೋರಾಟಕ್ಕೆ ಬೆಂಬಲ ನೀಡಿಲ್ಲ ಎಂದ ಮಾತ್ರಕ್ಕೆ ಮೇಕೆದಾಟು ಯೋಜನೆಯ ಬಗ್ಗೆ ಯಾರಿಗೂ ಕಾಳಜಿ ಇಲ್ಲ ಅಂತಲ್ಲ.
ಮೇಕೆದಾಟು ಹೋರಾಟ ಜನಪರ ಇದೆ ಅಂತಲೂ ನಾನು ಹೇಳುವುದಿಲ್ಲ. ಶ್ರೀಮಂತರಿಗೆ ಲಾಭ ಆಗುವುದು ಸಲುವಾಗಿಯೇ ಮೇಕೆದಾಟು ಯೋಜನೆ ಇದೆ. ನಟ್ಟು ಬೋಲ್ಟು ಎಂಬುದು ದುರಹಂಕಾರದ ಮಾತು. ಸಿನಿಮಾ ರಂಗ ಆಗಲಿ ಅಥವಾ ಯಾರೇ ಆಗಲಿ ಒಳ್ಳೆ ಮಾತಿನಿಂದ ಕರೆದರೆ ಬಂದೇ ಬರುತ್ತಾರೆ ಎಂದರು.
ಹನಿಟ್ರ್ಯಾಪ್ ಬಗ್ಗೆ ಮಾತನಾಡಿದ ಅವರು, ನನ್ನ ಪ್ರಕಾರ ಹನಿಟ್ರಾö್ಯಪ್ ಪುರುಷ ಪ್ರಧಾನದ ಆಲೋಚನೆ. ಸಾಮಾನ್ಯವಾಗಿ ಇಬ್ಬರ ಒಪ್ಪಿಗೆಯಿಂದ ಈ ಕ್ರಿಯೆ ನಡೆಯುತ್ತೆ. ಗಂಡಸರು ತಮ್ಮನ್ನೇ ತಾವೇ ಬಲಿಪಶು ಮಾಡಿಕೊಳ್ಳುವಂತಹ ಕೆಲಸ ಆಗುತ್ತಿದೆ. ಜನರಿಗೂ ಕೂಡ ಒಬ್ಬ ವ್ಯಕ್ತಿಯ ಖಾಸಗಿ ವಿಷಯದ ಬಗ್ಗೆ ಒಲವು ಜಾಸ್ತಿ. ನಮಗೆ ಸದನದಲ್ಲಿ ಜನಪರ ಕಾನೂನು ಬಗ್ಗೆ ಹೆಚ್ಚಿನ ವಿಚಾರಗಳ ಚರ್ಚೆ ಆಗಬೇಕು. ಸಿಡಿ, ಪೆನ್ ಡ್ರೈವ್‌ಗಿಂತ ಜನರ ಬದುಕಿನ ಬಗ್ಗೆ ಹೆಚ್ಚಿನ ಚರ್ಚೆ ಆಗಬೇಕು ಎಂದರು.