ಕೆರೆಯಲ್ಲಿ ಬಾದಾಮಿ ಚಾಲುಕ್ಯರ ಕಾಲದ ಶಿಲಾಶಾಸನ ಪತ್ತೆ

0
39

ದಾವಣಗೆರೆ: ನ್ಯಾಮತಿ ತಾಲೂಕಿನ ಮಾದಾಪುರ ಕೆರೆಯಲ್ಲಿ ಬಾದಾಮಿ ಚಾಲುಕ್ಯರ ಒಂದನೇ ವಿಕ್ರಮಾದಿತ್ಯನ ಕಾಲದ ಶಿಲಾಶಾಸನ ಪತ್ತೆಯಾಗಿದೆ ಎಂದು ಕಮಲಾಪುರದಲ್ಲಿನ ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ನಿರ್ದೇಶಕ ಡಾ.ಆರ್. ಶೇಜೇಶ್ವರ ತಿಳಿಸಿದ್ದಾರೆ.
ಮಾದಾಪುರ ಕೆರೆಯಲ್ಲಿ ಸ್ಥಳೀಯರು ಜೆಸಿಬಿಯಿಂದ ಮಣ್ಣು ತೆಗೆಯುವಾಗ ಶಿಲಾ ಶಾಸನ ಪತ್ತೆಯಾಗಿದೆ. ಇಲ್ಲಿಗೆ ಪುರಾತತ್ವ ಇಲಾಖೆ ನಿರ್ದೇಶಕರು ಭೇಟಿ ನೀಡಿ ಪರಿಶೀಲಿಸಿದ ನಂತರ ಇದು ಬಾದಾಮಿ ಚಲುಕ್ಯರ ಶಿಲಾಶಾಸನವಾಗಿದೆ ಎಂದು ತಿಳಿದು ಬಂದಿದೆ.
ಶಾಸನವು ೫ ಅಡಿ ಉದ್ದವಿದ್ದು ಹಳೆಗನ್ನಡದ ೧೭ ಸಾಲು ಶಾಸನ ಬರಹ ಇದೆ. ಇದು ಕ್ರಿ.ಶ ೭ನೇ ಶತಮಾನದ ಬಾದಾಮಿ ಚಲುಕ್ಯರ ಒಂದನೇ ವಿಕ್ರಮಾದಿತ್ಯನ ಕ್ರಿ.ಶ. ೬೫೪-೬೮೧ ಕಾಲದ ಶಾಸನವಾಗಿದೆ. ಒಂದನೇ ವಿಕ್ರಮಾದಿತ್ಯನು ರಾಜ್ಯವಾಳುವಾಗ ಅವನ ಅಧಿಕಾರಿ ಸಿಂಘವೆಣ್ಣನು ಬಳ್ಳಾವಿ ನಾಡನ್ನು ಆಳುತ್ತಿದ್ದಾಗ ಪೂರ್ವ ಮರ್ಯಾದೆಯಿಂದ ಪ್ರಜೆಗಳಿಗಾಗಿ ಊರ ಮೇಲಿನ ಕೆಲವು ತೆರಿಗೆಗಳನ್ನು ಮನ್ನಾ ಮಾಡಿರುವುದನ್ನು ಹಾಗೂ ಕೆರೆಯನ್ನು ನಿರ್ಮಿಸಿದ ಓಜರಿಗೆ ಆರು ಮತ್ತರು ಭೂಮಿಯನ್ನು ದಾನ ನೀಡಿರುವುದನ್ನು ಹಾಗೂ ಈ ಭೂಮಿಯು ಬಳ್ಳಾವಿ ಎಪ್ಪತ್ತರ ಒಕ್ಕಲುಗಳಿಗೆ ಸಲ್ಲುತ್ತದೆ ಎಂದು ಉಲ್ಲೇಖಿಸಲಾಗಿದೆ.
ಈ ಶಾಸನ ಶೋಧನೆಯಿಂದ ಬಳ್ಳಾವಿ ಎಪ್ಪತ್ತು ಎಂಬ ೭೦ ಗ್ರಾಮಗಳಿದ್ದ ಆಡಳಿತ ವಿಭಾಗದ ಪ್ರಾಚೀನತೆಯನ್ನು ಹಾಗೂ ಶಾಸನವು ೧೩೪೪ ವರ್ಷಗಳ ಪುರಾತನವಾದದು ಎಂದು ತಿಳಿಸುತ್ತದೆ. ಈ ಶಾಸನದ ಮುಂಭಾಗ ಹಾಗೂ ಹಿಂಭಾಗದಲ್ಲಿ ಕ್ರಿ.ಶ.೧೭ನೇ ಶತಮಾನದಲ್ಲಿ ಅಪೂರ್ಣ ಉಬ್ಬು ಶಿಲ್ಪವಿದೆ.
ಈ ಶಾಸನ ಓದಿಕೊಟ್ಟ ಪ್ರೊ.ಶ್ರೀನಿವಾಸ ಪಾಡಿಗರ, ರಮೇಶ ಹಿರೇಜಂಬೂರು, ಕ್ಷೇತ್ರ ಕಾರ್ಯದಲ್ಲಿ ಸಹಕರಿಸಿದ ಡಾ. ರವಿಕುಮಾರ ನವಲಗುಂದ, ಮಂಜಪ್ಪ ಚುರ್ಚಿಗುಂಡಿ, ಮಾದಾಪುರ ಗ್ರಾಮ ಆಡಳಿತಾಧಿಕಾರಿ ವಿಶ್ವನಾಥ, ಗ್ರಾಮಸ್ಥರಾದ ಬುಜಂಗ, ವೀರೇಶ್ ಹಾಗೂ ಇತರರ ಕಾರ್ಯವನ್ನು ಪುರಾತ್ವತ ಇಲಾಖೆ ನಿರ್ದೇಶಕರು ಶ್ಲಾಘಿಸಿದ್ದಾರೆ.

Previous articleನೇಹಾ ಹತ್ಯೆ ಪ್ರಕರಣ: ಮೇ 3ಕ್ಕೆ ವಿಚಾರಣೆ ಮುಂದೂಡಿಕೆ
Next articleಸುಪ್ರೀಂ ಕೋರ್ಟ್‌ನ 52ನೇ ಮುಖ್ಯ ನ್ಯಾಯಮೂರ್ತಿಯಾಗಿ ಬಿ.ಆರ್. ಗವಾಯಿ ನೇಮಕ