ಕಲಬುರಗಿ: ಕೆಪಿಸಿಸಿ ಅಧ್ಯಕ್ಷರು, ಮಂತ್ರಿಗಳ ಬದಲಾವಣೆ ಸೇರಿ ಎಲ್ಲವೂ ಹೈಕಮಾಂಡ್ ಅಂತಿಮವಾಗಿ ತೀರ್ಮಾನಿಸಲಿದೆ. ಹೀಗಾಗಿ, ಈ ಬಗ್ಗೆ ಏನು ಹೇಳಲಾರೆ ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ ತಿಳಿಸಿದರು.
ಭಾನುವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸದ್ಯ ಪಕ್ಷದ ಹೈಕಮಾಂಡ್ ಕಲಬುರಗಿಯಲ್ಲಿದೆ. ಎಐಸಿಸಿ ವರಿಷ್ಠರು ಬಂದಾಗ ಅವರನ್ನೆ ಕೇಳುವುದು ಸೂಕ್ತ ಎಂದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದಾಗಿನಿಂದಲೂ ಅಶಾಂತಿ ವಾತಾವರಣ, ಗಲಾಟೆ ಪ್ರಕರಣಗಳ ಬಗ್ಗೆ ಎಲ್ಲ ರೀತಿಯಿಂದಲೂ ಚರ್ಚೆಗಳಾಗುತ್ತಲೇ ಇರುತ್ತವೆ. ರಾಜಕೀಯದಲ್ಲಿ ಈ ರೀತಿ ಚರ್ಚೆಗಳು ಸಾಮಾನ್ಯವಾಗಿ ನಡೆಯುತ್ತಲೆ ಇರುತ್ತವೆ. ಆದರೆ ಯಾವ ಶ್ರೀಗಳು ಮಾತಾಡಕೂಡದು. ಅದರಲ್ಲೂ ರಾಜಕೀಯವಂತು ಸ್ವಾಮೀಜಿಗಳು ಮಾತಾಡಲೇಬಾರದು ಎಂದು ತಮ್ಮ ವೈಯಕ್ತಿಕ ನಿಲುವು ಸ್ಪಷ್ಟಪಡಿಸಿದರು.
ಸತ್ಯಾಂಶ ಹೊರಬರಲಿ
ಸಂಘ ಪರಿವಾರದವರು ಕೆಲವು ಕಡೆ ಬುರ್ಖಾ ಧರಿಸಿಕೊಂಡು ಗಲಾಟೆ ಮಾಡುವುದಕ್ಕೆ ಬಿಡುತ್ತಾರೆ. ಇದೇನು ಹೊಸದೆನ್ನಲ್ಲ, ನನ್ನ ಬಳಿ ವಿಡಿಯೋ ಇವೆ ಎಂದಿರುವ ಬಿ.ಕೆ. ಹರಿಪ್ರಸಾದ್, ತನಿಖೆಗೊಳಪಡಿಸಿದರೆ ಎಲ್ಲ ಸತ್ಯಾಂಶ ಹೊರಬರಲಿದೆ ಎಂದರು.
ಬಿಜೆಪಿಯವರ ಪಿತೃಪಕ್ಷ ಆರ್‌ಎಸ್‌ಎಸ್‌ಗೆ ನೂರು ವರ್ಷದ ಸಂಭ್ರಮದಲ್ಲಿದ್ದು, ಹೀಗಾಗಿ ಅವರೇ ಎಲ್ಲ ಕೃತ್ಯ ನಡೆಸುತ್ತಾರೆ. ಅವರ ತಮ್ಮ ಎಲ್ಲ ಚಿಂತನೆಗಳು ಅನುಷ್ಠಾನಕ್ಕೆ ತರುವ ಷಡ್ಯಂತ್ರ ಅಷ್ಟೇ. ಆದರೆ ಕರ್ನಾಟಕದಲ್ಲಿ ಅದು ಸಾಧ್ಯವಿಲ್ಲದ ಮಾತು. ಶಾಂತಿ ಕದಡಲು ಯತ್ನಿಸಿರುವ ದೃಶ್ಯಾವಳಿ ಇವೆ. ತನಿಖೆ ನಡೆಸಿದರೆ ಸಂಪೂರ್ಣ ಎಲ್ಲ ಸತ್ಯಾಂಶ ಹೊರಬೀಳಲಿದೆ ಎಂದರು.
ವಿಜಯಪುರದಲ್ಲಿ ಪಾಕಿಸ್ತಾನದ ಬಾವುಟ ಹಾರಿಸಿದವನು ಸಂಘ ಪರಿವಾರಕ್ಕೆ ಸೇರಿದವನು. ಯಾರೆ ಆಗಲಿ ಧರ್ಮ, ಜಾತಿ, ಭಾಷೆ ಹೆಸರಲ್ಲಿ ಶಾಂತಿ ಕದಡಿದರೆ ಅಂಥವರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.