ಬಾಗಲಕೋಟೆ: ಜಿಲ್ಲಾಸ್ಪತ್ರೆಯಲ್ಲಿ ಎಂಆರ್‌ಐ ಸ್ಕ್ಯಾನಿಂಗ್ ಯಂತ್ರದ ಸೌಕರ್ಯವಿಲ್ಲದಿರುವ ಬಗ್ಗೆ ಸಂಯುಕ್ತ ಕರ್ನಾಟಕದಲ್ಲಿ ಪ್ರಕಟಗೊಂಡಿರುವ ವಿಶೇಷ ವರದಿಯು ಶನಿವಾರ ಜಿಲ್ಲಾಡಳಿತ ಭವನದಲ್ಲಿ ಜರುಗಿದ ಕೆಡಿಪಿ ಸಭೆಯಲ್ಲಿ ಪ್ರತಿಧ್ವನಿಸಿತು. ಪತ್ರಿಕೆಯಲ್ಲಿ ನಿರಂತರ ವರದಿಯಾಗಿದ್ದು, ಈ ಬಗ್ಗೆ ಏನೆಲ್ಲ ಕ್ರಮಕೈಗೊಂಡಿದ್ದೀರಿ ಎಂದು ಡಿಎಚ್‌ಒ ಡಾ.ಮಂಜುನಾಥ ಅವರಿಗೆ ಉಸ್ತುವಾರಿ ಕಾರ್ಯದರ್ಶಿ ಮೊಹಮ್ಮದ್ ಮೊಹಿಸಿನ್, ಜಿಲ್ಲಾಧಿಕಾರಿ ಕೆ.ಎಂ.ಜಾನಕಿ ಪ್ರಶ್ನೆ ಮಾಡಿದರು.
ಎಂಆರ್‌ಐ ಸ್ಕ್ಯಾನಿಂಗ್ ಕೇಂದ್ರ ಸ್ಥಾಪನೆಗೆ ಸ್ಥಳಾವಕಾಶವಿದೆಯೇ, ಸರ್ಕಾರದಿಂದ ಯಂತ್ರ ಲಭ್ಯವಾದರೆ ತಂತ್ರಜ್ಞರು ನಿಮ್ಮ ಬಳಿ ಇದ್ದಾರೆ ಎಂದು ಸಭೆಯಲ್ಲಿ ಪ್ರಶ್ನಿಸಿದರು. ಅದಕ್ಕೆ ಉತ್ತರಿಸಿದ ಮಂಜುನಾಥ ಅವರು ಜಿಲ್ಲಾಸ್ಪತ್ರೆ ಆವರಣದಲ್ಲಿ ಸ್ಥಳ ನಿಗದಿಮಾಡಲಾಗಿದೆ. ಯಂತ್ರವನ್ನು ಪೂರೈಸುವ ಸಂಸ್ಥೆ ಅಥವಾ ನಿರ್ವಹಣೆಯ ಹೊಣೆ ಹೊರುವ ಸಂಸ್ಥೆಯೇ ತಂತ್ರಜ್ಞರನ್ನು ನೇಮಿಸಲಿದೆ. ಸರ್ಕಾರದ ಮಟ್ಟದಲ್ಲೇ ಈ ಕಾರ್ಯವಾಗಬೇಕಿದೆ ಎಂದರು. ಅದಕ್ಕೆ ಉತ್ತರಿಸಿದ ಮೋಹಸಿನ್ ಈ ಕುರಿತು ಪತ್ರ ಬರೆಯುವುದಲ್ಲದೇ ನಿರಂತರ ಪ್ರಯತ್ನದಲ್ಲಿರುವಂತೆ ಸೂಚಿಸಿದರು.