ಬೆಂಗಳೂರು: ಇವತ್ತು ಸಿಂಧನೂರಿನಲ್ಲಿ ಬಂದ್ ಕರೆ ನೀಡಲಾಗಿದೆ ಎನ್ನುವುದಾದರೂ ಗೊತ್ತಿದೆಯೇ? ಎಂದು ಕೃಷಿ ಸಚಿವ ಎನ್. ಚಲುವರಾಯ ಸ್ವಾಮಿ ಅವರನ್ನು ವಿಪಕ್ಷ ನಾಯಕ ಆರ್.ಅಶೋಕ್ ಪ್ರಶ್ನಿಸಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಸಿಂಧನೂರಿನಲ್ಲಿ ಜೋಳ ಬೆಳೆಗಾರರು ಬೀದಿಗೆ ಬಂದು ಹೋರಾಟ ಮಾಡುತ್ತಿರುವ ವಿಷಯ ತಮ್ಮ ಗಮನಕ್ಕೆ ಬಂದಿದೆಯೇ? ಯಾವ ಕಾರಣಕ್ಕಾಗಿ ಇವತ್ತು ಸಿಂಧನೂರಿನಲ್ಲಿ ಬಂದ್ ಕರೆ ನೀಡಲಾಗಿದೆ ಎನ್ನುವುದಾದರೂ ಗೊತ್ತಿದೆಯೇ? ಡಿಸೆಂಬರ್ 31ರ ಒಳಗೆ ಜೋಳ ಖರೀದಿ ನೋಂದಣಿ ಮುಗಿಯಬೇಕಿತ್ತು. ಜನವರಿ 31ರೊಳಗೆ ಜೋಳ ಖರೀದಿ ಪ್ರಕ್ರಿಯೆ ಪೂರ್ಣಗೊಳ್ಳಬೇಕಿತ್ತು. ಆದರೆ ರಾಜ್ಯ ಕಾಂಗ್ರೆಸ್ ಸರ್ಕಾರ ನಾಲ್ಕು ತಿಂಗಳ ನಂತರ ಅಂದರೆ ಮೇ ತಿಂಗಳಲ್ಲಿ ಖರೀದಿ ಆರಂಭಿಸಿದ್ದರಿಂದ ಜೋಳಕ್ಕೆ ನುಸಿ ಮತ್ತು ಹುಳ ಬಂದಿದೆ. ಈಗ ಏಕಾಏಕಿ ಜೋಳ ಖರೀದಿಯನ್ನೇ ನಿಲ್ಲಿಸಲಾಗಿದೆ. ಇದರಿಂದ ರೈತರಿಗೆ ಆಗುತ್ತಿರುವ ನಷ್ಟಕ್ಕೆ ಯಾರು ಹೊಣೆ? ಈ ರೈತವಿರೋಧಿ ಕಾಂಗ್ರೆಸ್ ಸರ್ಕಾರಕ್ಕೆ ಅನ್ನದಾತರ ಕಣ್ಣೀರಿನ ಶಾಪ ತಟ್ಟದೇ ಇರದು ಎಂದಿದ್ದಾರೆ.