ಕೃಷಿ ಪತ್ತಿನ ಸಹಕಾರ ಸಂಘಕ್ಕೆ ರೈತ ಸಂಘದ ಬೆಂಬಲಿತ ಅಭ್ಯರ್ಥಿಗಳು ಆಯ್ಕೆ

ಪಾಂಡವಪುರ : ತಾಲೂಕಿನ ಲಕ್ಷ್ಮೀಸಾಗರ ಗ್ರಾಮದ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಯ ನಿರ್ದೇಶಕರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ರೈತಸಂಘದ ಬೆಂಬಲಿತ ಅಭ್ಯರ್ಥಿಗಳು ಹಾಗೂ ಕೆಪಿಸಿಸಿ ಸದಸ್ಯ ಬಿ.ರೇವಣ್ಣ ಅವರ ಬಣದ ಬೆಂಬಲಿಗರು ಜಯಭೇರಿ ಬಾರಿಸಿದ್ದಾರೆ. ಜೆಡಿಎಸ್, ಬಿಜೆಪಿ ಹಾಗೂ‌ ಕಾಂಗ್ರೆಸ್ ಮೈತ್ರಿಕೂಟದ ಬೆಂಬಲಿತ‌ ಅಭ್ಯರ್ಥಿಗಳು ಹೀನಾಯ ಸೋಲು ಅನುಭವಿಸಿದ್ದಾರೆ.

5 ವರ್ಷಗಳ ಆಡಳಿತಾವಧಿಗೆ ನಡೆದ ಚುನಾವಣೆಯಲ್ಲಿ ಒಟ್ಟು 11 ಸ್ಥಾನಗಳ ಪೈಕಿ 8 ಸ್ಥಾನಗಳಲ್ಲಿ ರೈತಸಂಘದ ಬೆಂಬಲಿತ ಅಭ್ಯರ್ಥಿಗಳು‌ ಹಾಗೂ 3 ಸ್ಥಾನಗಳಲ್ಲಿ ಜೆಡಿಎಸ್, ಬಿಜೆಪಿ ಹಾಗೂ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಜಯಗಳಿಸಿದ್ದಾರೆ.

ಸಾಲಗಾರರ ಕ್ಷೇತ್ರದಿಂದ ರೈತಸಂಘದ ಬೆಂಬಲಿತ ಅಭ್ಯರ್ಥಿಗಳಾದ ಎಲ್.ಬಿ.ರವಿ, ಎಲ್.ಎನ್.ಕೆಂಚೇಗೌಡ (ಸಾಮಾನ್ಯ), ಎಲ್.ಪಿ.ಕುಮಾರ (ಬಿಸಿಎಂ ಎ), ಎಲ್.ಡಿ.ಮಹೇಶ್ (ಬಿಸಿಎಂ ಬಿ), ನಾಗಬೋಯಿ‌ (ಪರಿಶಿಷ್ಟ ಜಾತಿ), ವೀಣಾ ಹಾಗೂ ನಾಗರತ್ನ (ಮಹಿಳಾ ಮೀಸಲು) ಮತ್ತು ಜೆಡಿಎಸ್, ಬಿಜೆಪಿ ಹಾಗೂ ಕಾಂಗ್ರೆಸ್ ಮೈತ್ರಿಕೂಟದ ಬೆಂಬಲಿತ ಅಭ್ಯರ್ಥಿಗಳಾದ ಎಲ್.ಕೆ.ಮರಿಚಲುವೇಗೌಡ, ಎಲ್.ಸಿ.ಕೃಷ್ಣಮೂರ್ತಿ ಹಾಗೂ ಎಂ.ಡಿ.ಗಿರೀಶ್ (ಸಾಮಾನ್ಯ ವರ್ಗ) ಗೆಲುವು ಸಾಧಿಸಿದ್ದಾರೆ.

ಸಾಲಗಾರರಲ್ಲದ ಕ್ಷೇತ್ರದಿಂದ ರೈತಸಂಘದ ಬೆಂಬಲಿತ ಅಭ್ಯರ್ಥಿ ಎಲ್.ಜೆ.ಹನುಮೇಗೌಡ ಜಯಭೇರಿ ಬಾರಿಸಿದ್ದಾರೆ.

ವಿಜೇತ ಅಭ್ಯರ್ಥಿಗಳನ್ನು ‌ಅಭಿನಂದಿಸಿ ಮಾತನಾಡಿದ ರೈತಸಂಘದ ಮುಖಂಡ ರಂಗಸ್ವಾಮಿ, ಕಳೆದ 40ವರ್ಷಗಳಿಂದ ಒಂದು‌ ಕುಟುಂಬದ ಕಪಿಮುಷ್ಟಿಯಲ್ಲಿದ್ದ ಲಕ್ಷ್ಮೀಸಾಗರದ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತವು ಇದೀಗ ಕಳಚಿ ಬಿದ್ದಿದೆ. ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಹಾಗೂ ಕೆಪಿಸಿಸಿ ಸದಸ್ಯ, ಸಮಾಜ ಸೇವಕ ಬಿ.ರೇವಣ್ಣ ಅವರ ಬಣಕ್ಕೆ ಜಯ ದೊರಕಿದೆ. ಮುಂದಿನ ದಿನಗಳಲ್ಲಿ ಕ್ಷೇತ್ರದ ಶಾಸಕ ದರ್ಶನ್ ಪುಟ್ಟಣ್ಣಯ್ಯ ಹಾಗೂ ಸಮಾಜ ಸೇವಕ ಬಿ.ರೇವಣ್ಣ ಅವರ ಮಾರ್ಗದರ್ಶನದಲ್ಲಿ ಲಕ್ಷ್ಮೀಸಾಗರ ಕೃಷಿ ಪತ್ತಿನ ಸಹಕಾರ ಸಂಘವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವ ಮೂಲಕ ಮಾದರಿ ಸಂಘವನ್ನಾಗಿ ರೂಪಿಸಲಾಗುವುದು ಎಂದರು.

ಈ ವೇಳೆ ರೈತಸಂಘದ ಕಾರ್ಯಕರ್ತರು ಹಾಗೂ ಸಮಾಜ‌ ಸೇವಕ ಬಿ.ರೇವಣ್ಣ ಅವರ ಬೆಂಬಲಿಗರು ಪಟಾಕಿ ಸಿಡಿಸಿ, ಸಿಹಿ ವಿತರಿಸಿ ಸಂಭ್ರಮಿಸಿದರು. ಸಹಕಾರ ಇಲಾಖೆಯ ಕೆ.ಎಂ.ನಿರ್ಮಲಾ ಅವರು ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು.