ನಕಲಿ ಪತ್ರ, ಕರೆ ನಂಬದಂತೆ ರೈತರಿಗೆ ಸೂಚನೆ
ಹುಬ್ಬಳ್ಳಿ : ‘ಕುಸುಮ್-ಬಿ ಯೋಜನೆ’ ಹೆಸರಿನಲ್ಲಿ ರೈತರಿಗೆ ನಕಲಿ ಅನುಮೋದನೆ ಪತ್ರ ರವಾನಿಸಿ ಹಣ ವಸೂಲಿ ಮಾಡಲು ವಂಚಕರು ಯತ್ನಿಸಿರುವ ಪ್ರಕರಣ ಬೆಳಕಿಗೆ ಬಂದಿದ್ದು, ಇಂತಹ ಯಾವುದೇ ನಕಲಿ ಅನುಮೋದನೆ ಪತ್ರಗಳು, ಕರೆಗಳಿಗೆ ಸ್ಪಂದಿಸದಂತೆ ಹೆಸ್ಕಾಂ ಕೋರಿದೆ.
ಹೆಸ್ಕಾಂ ವ್ಯಾಪ್ತಿಯ ನವಲಗುಂದ ತಾಲೂಕಿನ ಹೆಬ್ಬಾಳ ಗ್ರಾಮದ ರೈತರೊಬ್ಬರಿಗೆ ವಂಚಕರು ಕುಸುಮ್-ಬಿ ಅನುಮೋದನೆಯ ನಕಲಿ ಪತ್ರ ಕಳುಹಿಸಿದ್ದಾರೆ. ಕುಸುಮ್ ಬಿ ಯೋಜನೆಗೆ ನಿಮ್ಮ ಅರ್ಜಿ ಪುರಸ್ಕೃತಗೊಂಡಿದ್ದು, ನಿಮ್ಮ ಜಮೀನಿನಲ್ಲಿ ಸೋಲಾರ್ ಪಂಪ್‌ಸೆಟ್ ಅಳವಡಿಸಲು 3,150 ರೂ. ಕಾನೂನು ಶುಲ್ಕ ಪಾವತಿಸಬೇಕಿದೆ. ಸೋಲಾರ್ ಪಂಪ್ ಅಳವಡಿಸಿದ ನಂತರ ಈ ಹಣವನ್ನು ನಿಮಗೆ ಮರುಪಾವತಿಸಲಾಗುತ್ತದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಜೊತೆಗೆ ಪದೇ ಪದೆ ಕರೆ ಮಾಡಿ ಪತ್ರದಲ್ಲಿ ನಮೂದಿಸಿರುವ ಬ್ಯಾಂಕ್ ಖಾತೆಗೆ ಹಣ ಪಾವತಿಸುವಂತೆ ಪೀಡಿಸಿರುವುದು ವರದಿಯಾಗಿದೆ.
ಈ ಹಿನ್ನೆಲೆಯಲ್ಲಿ ರೈತರಿಗೆ ಎಚ್ಚರಿಕೆಯಿಂದ ಇರುವಂತೆ ಸೂಚಿಸಿರುವ ಹೆಸ್ಕಾಂ, ಕುಸುಮ್- ಬಿ ಯೋಜನೆಯಡಿ ರೈತರಿಂದ ಯಾವುದೇ ರೀತಿಯ ಶುಲ್ಕ ಸ್ವೀಕರಿಸುವುದಿಲ್ಲ. ಇಂತಹ ಅನುಮೋದನೆ ಪತ್ರ ಹಾಗೂ ಕರೆಗಳನ್ನು ನಂಬಬೇಡಿ ಮತ್ತು ಅಂತಹ ಕರೆಗಳಿಗೆ ಸ್ಪಂದಿಸಬೇಡಿ. ಅಂತಹ ಕರೆಗಳು ಬಂದಲ್ಲಿ ಕೂಡಲೇ ಹೆಸ್ಕಾಂ ಸಹಾಯವಾಣಿ 1912ಕ್ಕೆ ಕರೆ ಮಾಡಿ ಅಥವಾ ಸಮೀಪದ ಹೆಸ್ಕಾಂ ಕಚೇರಿಗೆ ದೂರು ನೀಡಿ ಎಂದು ರೈತರಲ್ಲಿ ಮನವಿ ಮಾಡಿದೆ.