ಕುಡುಪು ಗುಂಪು ಕೊಲೆ ಪ್ರಕರಣ: ಇನ್ಸ್‌ಪೆಕ್ಟರ್ ಸಹಿತ ಮೂವರ ಅಮಾನತು

0
23

ಮಂಗಳೂರು: ನಗರದ ಕುಡುಪು ಭಟ್ರಕಲ್ಲುರ್ಟಿ ದೈವಸ್ಥಾನದ ಬಳಿ ನಡೆದ ಗುಂಪು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಮಂಗಳೂರು ಗ್ರಾಮಾಂತರ ಠಾಣೆಯ ಇನ್ಸ್‌ಪೆಕ್ಟರ್ ಸೇರಿದಂತೆ ಓರ್ವ ಹೆಡ್ ಕಾನ್ಸ್‌ಸ್ಟೇಬಲ್, ಕಾನ್ಸ್‌ಸ್ಟೇಬಲ್ ಅಮಾನತುಗೊಳಿಸಿ ಮಂಗಳೂರು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಆದೇಶ ಹೊರಡಿಸಿದ್ದಾರೆ.
ಮಂಗಳೂರು ಗ್ರಾಮಾಂತರ ಠಾಣೆಯ ಇನ್ಸ್‌ಪೆಕ್ಟರ್ ಶಿವಕುಮಾರ್, ಹೆಡ್ ಕಾನ್ಸ್‌ಸ್ಟೇಬಲ್, ಚಂದ್ರ ಪಿ ಮತ್ತು ಕಾನ್ಸ್‌ಸ್ಟೇಬಲ್ ಯಲ್ಲಾಲಿಂಗ ಗುಂಪು ಹತ್ಯೆ ಪ್ರಕರಣದಲ್ಲಿ ಅಮಾನತುಗೊಂಡವರು.
ಅಪರಿಚಿತ ವ್ಯಕ್ತಿಗೆ ಗುಂಪು ಹಲ್ಲೆ ನಡೆದಿರುವ ಬಗ್ಗೆ ಈ ಮೂವರಿಗೆ ಮಾಹಿತಿಯಿದ್ದರೂ ಮೇಲಾಧಿಕಾರಿಗಳ ಗಮನಕ್ಕೆ ತಾರದೆ ನಿರ್ಲಕ್ಷ್ಯ ತೋರಿದ್ದಾರೆ. ಅಲ್ಲದೆ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣಾ ಯುಡಿಆರ್ ನಂ ೧೪/೨೦೨೫ರಲ್ಲಿ ಫಿರ್ಯಾದುದಾರರಾಗಿ ಹಾಗೂ ಸ್ಥಳದಲ್ಲಿ ದೊರೆತ ಶವದ ಪಂಚನಾಮೆಗೆ ಪಂಚರನ್ನಾಗಿ ಮೈದಾನದಲ್ಲಿ ಕ್ರಿಕೆಟ್ ಪಂದ್ಯಾಟ ಆಟವಾಡಿದ ಆಟಗಾರರು ಹಾಗೂ ಪ್ರೇಕ್ಷಕರನ್ನು ಬಳಸಿಕೊಂಡಿರುವುದು ಕಂಡು ಬಂದಿರುತ್ತದೆ. ಇದರಿಂದ ಗುಂಪು ಹತ್ಯೆ ಪ್ರಕರಣವು ಮೊದಲು ಯುಡಿಆರ್ ಪ್ರಕರಣವಾಗಿ, ಬಳಿಕ ಗುಂಪು ಹತ್ಯೆ ಪ್ರಕರಣ ದಾಖಲಾಗಲು ಕಾರಣವಾಗಿದೆ. ಆದ್ದರಿಂದ, ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕ ಮತ್ತು ಕಾನ್ಸ್‌ಸ್ಟೇಬಲ್‌ಗಳ ವಿರುದ್ಧ ಇಲಾಖಾ ಶಿಸ್ತು ಕ್ರಮ ಕೈಗೊಳ್ಳುವಂತೆ ಪ್ರಸ್ತಾಪಿಸಲಾಗಿದೆ. ಈ ಮೇಲಿನ ಆಪಾದನೆಗಳಿಗಾಗಿ ತಕ್ಷಣದಿಂದ ಜಾರಿಗೆ ಬರುವಂತೆ ಇಲಾಖಾ ಶಿಸ್ತು ಕ್ರಮ ಬಾಕಿ ಇರಿಸಿ ಮೂವರನ್ನು ಸೇವೆಯಿಂದ ಅಮಾನತುಗೊಳಿಸಿ ಪೊಲೀಸ್ ಕಮಿಷನರ್ ಆದೇಶಿಸಿದ್ದಾರೆ.

ಎಫ್‌ಐಆರ್‌ನಲ್ಲಿ ಏನಿದೆ: ಗುಂಪಿನಿಂದ ಕೇರಳದ ವಯನಾಡಿನ ಅಶ್ರಫ್ “ಪಾಕಿಸ್ಥಾನ್ ಪಾಕಿಸ್ಥಾನ್’ ಎಂದು ಬೊಬ್ಬೆ ಹಾಕಿದ್ದಕ್ಕೆ ಆತನನ್ನು ಬೆನ್ನಟ್ಟಿ ಹಲ್ಲೆ ನಡೆಸಲಾಗಿತ್ತು ಎಂಬುದಾಗಿ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ದಾಖಲಿಸಿಕೊಂಡ ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.
ಮೈದಾನದಲ್ಲಿ ಕ್ರಿಕೆಟ್ ಪಂದ್ಯಾಟ ನಡೆಯುತ್ತಿದ್ದಾಗ ಬಂದ ಅಪರಿಚಿತ ವ್ಯಕ್ತಿ(ಅಶ್ರಫ್) “ಪಾಕಿಸ್ಥಾನ್ ಪಾಕಿಸ್ಥಾನ್’ ಎಂದು ಬೊಬ್ಬೆ ಹಾಕಿದ. ಆಗ ಅಲ್ಲಿದ್ದವರು ಆತನನ್ನು ಬೆನ್ನಟ್ಟಿ ಹಲ್ಲೆ ನಡೆಸಿದರು ಎಂದು ದೂರಿನಲ್ಲಿ ತಿಳಿಸಲಾಗಿದೆ.

ಮಾನಸಿಕ ಅಸ್ವಸ್ಥ..?: ಅಶ್ರಫ್ ಅವಿವಾಹಿತನಾಗಿದ್ದು ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದ ಎಂದು ಆತನ ಸಹೋದರ ಅಬ್ದುಲ್ ಜಬ್ಟಾರ್ ತಿಳಿಸಿದ್ದಾನೆ.
ಅಣ್ಣನಿಗೆ ಹಲವು ವರ್ಷಗಳಿಂದ ಮಾನಸಿಕ ಸಮಸ್ಯೆ ಇದ್ದು, ಊರೂರು ಸುತ್ತುತ್ತಿದ್ದ. ಚಿಕಿತ್ಸೆ ಕೊಡಿಸಿದರೂ ಸರಿಯಾಗಲಿಲ್ಲ. ನಾನು ಎರ್ನಾಕುಲಂನಲ್ಲಿ ನೆಲೆಸಿದ್ದು ಆತ ಆಗಾಗ ಬರುತ್ತಿದ್ದ. ಬಂದಾಗ ಬಟ್ಟೆ, ಮೊಬೈಲ್ ಕೊಡುತ್ತಿದ್ದೆ. ಅದನ್ನು ಎಲ್ಲೆಲ್ಲಿಯೋ ಬಿಟ್ಟು ಬರುತ್ತಿದ್ದ. ನನ್ನ ಹೆಸರಿನಲ್ಲಿಯೇ ಸಿಮ್ ಕೊಡಿಸಿದ್ದೆ. ಇತ್ತೀಚೆಗೆ ಮಂಗಳೂರಿನಲ್ಲಿ ಇರುವುದಾಗಿ ಹೇಳಿದ್ದ. ವಯನಾಡಿನಲ್ಲಿರುವ ಮನೆಗೆ ಅಮ್ಮನನ್ನು ನೋಡಲು ಕೆಲವೊಮ್ಮೆ ಬರುತ್ತಿದ್ದು ಕಳೆದ ಈದ್ ಹಬ್ಬಕ್ಕೆ ಬಂದಿದ್ದ. ಮಾನಸಿಕ ಸಮಸ್ಯೆಯಿಂದಾಗಿ ಈ ಸ್ಥಿತಿ ಬಂದಿದೆ ಎಂದಿದ್ದಾನೆ.

Previous articleನಾಳೆ ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶ ಪ್ರಕಟ
Next articleಜಾತಿಗಣತಿಯೊಂದಿಗೆ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮೀಕ್ಷೆಯೂ ನಡೆಯಲಿ