ಕುಂಭ ಮೇಳದಲ್ಲಿ ೨ನೇ ದಿನ ೩.೫ಕೋಟಿ ಭಕ್ತರ ಸ್ನಾನ

0
13

ಪ್ರಯಾಗ್‌ರಾಜ್: ದಟ್ಟವಾದ ಮಂಜು ಹಾಗೂ ಕೊರೆಯುವ ಚಳಿಯನ್ನೂ ಲೆಕ್ಕಸದೇ ಮಹಾಕುಂಭ ಮೇಳದ ಎರಡನೇ ದಿನವಾದ ಮಂಗಳವಾರ ಮಕರ ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ೩.೫೦ ಕೋಟಿಗೂ ಅಧಿಕ ಜನರು ತ್ರಿವೇಣಿ ಸಂಗಮದಲ್ಲಿ ಅಮೃತ ಸ್ನಾನ ಮಾಡುವ ಮೂಲಕ ಪುನೀತರಾದರು. ನಂಬಿಕೆ, ಸಮಾನತೆ ಹಾಗೂ ಏಕತೆಯ ಮಹಾಸಂಗಮವಾದ ಈ ಮೇಳದಲ್ಲಿ ಪವಿತ್ರ ಸ್ನಾನ ಮಾಡುತ್ರಿರುವಾಗಲೇ ಹೆಲಿಕಾಫ್ಟರ್‌ಗಳ ಮೂಲಕ ಪುಷ್ಪವೃಷಿ ಮಾಡಲಾಯಿತು.

ರುದ್ರಾಕ್ಷಿ ಕಿರೀಟ ಬಾಬಾ
ರುದ್ರಾಕ್ಷ ಬಾಬಾ ತಮ್ಮ ಅಸಾಧಾರಣ ತಪಸ್ಸಿನಿಂದ ಕುಂಭಮೇಳದಲ್ಲಿ ಆಕರ್ಷಕ ವ್ಯಕ್ತಿಯಾಗಿದ್ದಾರೆ. ಪ್ರತಿದಿನ ೪೫ ಕೆ.ಜಿ. ತೂಕದ ರುದ್ರಾಕ್ಷಿ ಮಣಿಗಳ ಕಿರೀಟವನ್ನು ತಲೆಯ ಮೇಲೆ ಧರಿಸಿ ೧೨ ಗಂಟೆಗಳ ಧ್ಯಾನ ಮಾಡುತ್ತಾರೆ. ೧.೨೫ ಲಕ್ಷ ರುದ್ರಾಕ್ಷಿ ಮಣಿಗಳನ್ನು ಧರಿಸುವುದಾಗಿ ವಾಗ್ದಾನ ಮಾಡಿದ್ದ ಅವರು ಈಗ ಭಕ್ತರ ಕೊಡುಗೆಯಿಂದಾಗಿ ೨.೨೫ ಲಕ್ಷ ಮಣಿಗಳನ್ನು ತಮ್ಮ ತಲೆಯನ್ನು ಅಲಂಕರಿಸಿದ್ದಾರೆ.

ಐಐಟಿ ಬಾಬಾ
ಐಐಟಿ ಬಾಬಾ ಎಂದೇ ಕರೆಯಲ್ಪಡುವ ಗೋರಖ್ ಬಾಬಾ, ಏರೋಸ್ಪೇಸ್ ಮತ್ತು ಏರೋನಾಟಿಕಲ್ ವಿಭಾಗ ದಲ್ಲಿ ಐಐಟಿ ಬಾಂಬೆಯ ಎಂಜಿನಿಯರಿಂಗ್ ಪದವೀ ಧರರು. ಹರಿಯಾಣ ನಿವಾಸಿ ಯಾದ ಅವರ ನಿಜವಾದ ಹೆಸರು ಅಭಯ್ ಸಿಂಗ್. ಎಂಜಿನಿಯರಿಂಗ್‌ನಿಂದ ಸನ್ಯಾಸಿಯಾಗುವವರೆಗಿನ ಅಭಯ್ ಸಿಂಗ್ ಅವರ ಜೀವನಯಾನ ತುಂಬಾ ಆಸಕ್ತಿದಾಯಕ. ಛಾಯಾಗ್ರಹಣದಲ್ಲಿ ತೀವ್ರ ಆಸಕ್ತಿ ಹೊಂದಿದ್ದ ಅವರು ಈ ಕ್ಷೇತ್ರದಲ್ಲಿ ವೃತ್ತಿಜೀವನ ಕಟ್ಟಿಕೊಳ್ಳಲು ಒಂದು ವರ್ಷದ ಪದವಿಯನ್ನೂ ಮುಗಿಸಿದ್ದರು. ಜ್ಞಾನದ ಅನ್ವೇಷಣೆಯಲ್ಲಿ ಈಗ ಆಧ್ಯಾತ್ಮಿಕತೆ ಅನುಸರಿಸುತ್ತಿದ್ದಾರೆ.

ಯುಟ್ಯೂಬರ್‌ಗೆ ಥಳಿತ
ಒಂದು ಕೈಯನ್ನು ಹಲವಾರು ವರ್ಷಗಳ ಕಾಲ ನಿರಂತರ ಮೇಲೆ ಹಿಡಿದುಕೊಂಡೇ ತಪಸ್ಸು ಮಾಡುತ್ತಿರುವ ಯೋಗಿ ಬಳಿ ಯುಟ್ಯೂಬರ್ ಬಂದು ಅಸಂಬದ್ಧ ಪ್ರಶ್ನೆ ಕೇಳಿದ್ದಕ್ಕೆ ಆತನಿಗೆ ಆ ಯೋಗಿ ತನ್ನ ಕೈಯಲ್ಲಿದ್ದ ಆಯುಧದಿಂದ ಥಳಿಸಿದ ಘಟನೆ ಈಗ ಸಾಮಾಜಿಕ ತಾಣದಲ್ಲಿ ವೈರಲ್ ಆಗಿದೆ. ಇದನ್ನು ವೀಕ್ಷಿಸಿದ ಹಲವರು ಯೋಗಿ ತಾಳ್ಮೆ ಕಳೆದುಕೊಂಡಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದರೆ, ಇನ್ನೂ ಹಲವರು ಅಸಂಬದ್ಧ ಪ್ರಶ್ನೆ ಕೇಳಿದ ಯುಟ್ಯೂಬರ್ ವಿರುದ್ಧ ಕಿಡಿಕಾರಿದ್ದಾರೆ.

ಕಮಲಾರಿಂದಲೂ ಸ್ನಾನ!
ಮಹಾಕುಂಭದಲ್ಲಿ ಆಪಲ್‌ನ ಸಹ ಸಂಸ್ಥಾಪಕ ಸ್ಟೀವ್ ಜಾಬ್ಸ್ ಪತ್ನಿ ಲಾರೆನ್ ಪೊವೆಲ್ ಜಾಬ್ಸ್(ಕಮಲಾ) ತುಸು ಅನಾರೋಗ್ಯಕ್ಕೆ ತುತ್ತಾದರೂ ಇದೇ ಮೊದಲ ಬಾರಿಗೆ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದರು. ಸ್ನಾನ ಮಾಡಿ ವಿಶ್ರಾಂತಿ ಪಡೆದುಕೊಂಡ ನಂತರ ಆಕೆ ಚೇತರಿಸಿಕೊಂಡಿದ್ದಾರೆ ಎಂದು ಉತ್ತರಪ್ರದೇಶ ಸರ್ಕಾರ ತಿಳಿಸಿದೆ.
ಎರಡನೇ ದಿನದ ಕಾರ್ಯಕ್ರಮದಲ್ಲಿ ಭಾಗವಹಿಸುವ ಮುನ್ನ ಅಲರ್ಜಿಯಿಂದ ಬಳಲುತ್ತಿದ್ದ ಅವರು ಅದಕ್ಕೆ ಚಿಕಿತ್ಸೆಯನ್ನೂ ಪಡೆದರು. ಆದಾಗ್ಯೂ ಗಂಗಾಸ್ನಾನ ಮಾಡಿದರು. ಇಷ್ಟೊಂದು ಜನರು ಇರುವ ಸ್ಥಳಕ್ಕೆ ತಾವು ಯಾವತ್ತೂ ಭೇಟಿ ನೀಡಿರಲಿಲ್ಲ ಎಂದವರು ಹೇಳಿಕೊಂಡಿದ್ದಾರೆ.

ವಿದೇಶಿಗರ ದಂಡು
ಈ ಸಾರಿ ಕುಂಭದಲ್ಲಿ ಅಮೆರಿಕಾ, ಫ್ರಾನ್ಸ್, ಬ್ರೆಜಿಲ್, ಬ್ರಿಟನ್ ಸೇರಿದಂತೆ ಅನೇಕ ಹೊರದೇಶಗಳಿಂದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದಾರೆ. ಈ ಪೈಕಿ ಹೆಚ್ಚಿನ ಸಂಖ್ಯೆಯ ಸಾಧ್ವಿಗಳು ತಮ್ಮ ಕುಟುಂಬ ಸಮೇತವಾಗಿ ಆಗಮಿಸಿ ಪುಣ್ಯ ಸ್ನಾನ ಮಾಡಿದರು.

ಜಪಾನ್ ಭಕ್ತೆ
ನಾನು ಗಂಗಾಜಲದಲ್ಲಿ ಪವಿತ್ರ ಸ್ನಾನ ಮಾಡಲು ಇಲ್ಲಿಗೆ ಬಂದಿದ್ದೇನೆ. ಮಹಾಕುಂಭವು ದೇಹ ಶುದ್ಧೀಕರಿಸಿ ಮತ್ತು ಶಕ್ತಿ ತುಂಬಲು ಎಲ್ಲರಿಗೂ ಅವಕಾಶ ನೀಡಿದೆ ಎಂದು ಜಪಾನ್‌ನ ಭಕ್ತ ಯೋಗಮಾತಾ ಕೈಕೊ ಐಕಾವಾ ಹೇಳಿದರು, ನಿರಂಜನ ಪೀಠಾಧೀಶ್ವರ ಸ್ವಾಮಿ ಕೈಲಾಶಾನಂದ ಗಿರಿ ಮಹಾರಾಜ್, ಸ್ವಾಮಿ ಚಿದಂಬರಾನಂದ ಹಾಗೂ ಇತರರು ಭಾಗವಹಿಸಿದ್ದರು.

ಹೃದಯಾಘಾತದಿಂದ ಸಾವು
ಎನ್‌ಸಿಪಿಯ ಶರದ್‌ಪವಾರ್ ಬಣದ ನಾಯಕ ಹಾಗೂ ಸೋಲಾಪುರದ ಮಾಜಿ ಮೇಯರ್ ಮಹೇಶ್ ಕೊಥೆ (೬೦) ಅವರು ಪ್ರಯಾಗ್‌ರಾಜ್‌ನಲ್ಲಿ ಮಂಗಳವಾರ ಪವಿತ್ರಸ್ಥಾನಕ್ಕೆ ಮಾಡಲು ಬರುವಾಗ ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟರು. ತ್ರಿವೇಣಿ ಸಂಗಮದಲ್ಲಿ ಬೆಳಗ್ಗೆ ೭.೩೦ರ ವೇಳೆ ಸಂಭವಿಸಿದೆ. ಮಹೇಶ್ ಅವರು ಹೃದಯಾಘಾತಕ್ಕೆ ಒಳಗಾದ ಕೂಡಲೇ ವೈದ್ಯಕೀಯ ಸೌಲಭ್ಯ ಕಲ್ಪಿಸಿದರೂ ಅವರು ಬದುಕುಳಿಯಲಿಲ್ಲ. ಮಕರಸಂಕ್ರಾಂತಿಯ ಶಾಹಿ ಸ್ನಾನ ಮಾಡಲೆಂದು ಅವರು ಈ ದಿನ ಅಲ್ಲಿಗೆ ತೆರಳಿದ್ದರು. ಸೋಲಾಪುರದಲ್ಲಿ ಅವರ ಅಂತ್ಯಕ್ರಿಯೆ ನಡೆಯಲಿದೆ. ಕೊಥೆ ನಿಧನಕ್ಕೆ ಎನ್‌ಸಿಪಿ(ಎಸ್‌ಪಿ) ನಾಯಕ ಶರದ್ ಪವಾರ್ ಗಾಢ ಸಂತಾಪ ವ್ಯಕ್ತಪಡಿಸಿದ್ದಾರೆ.

Previous articleಸಿಎಂ ಸ್ಥಾನದ ಬಗ್ಗೆ ಯಾವುದೇ ಗೊಂದಲವಿಲ್ಲ
Next articleಡ್ರಗ್ಸ್ ಕೇಸ್‌ನಿಂದ ನಟಿ ರಾಗಿಣಿ ದ್ವಿವೇದಿ ಕೋರ್ಟಲ್ಲಿ ಖುಲಾಸೆ