ಕುಂಭಮೇಳಕ್ಕೆ ತೆರಳಿದ್ದ ಗೋಕಾಕನ ೬ ಜನ ಸಾವು

0
11

ಗೋಕಾಕ: ಕಳೆದ ಒಂದು ವಾರದ ಹಿಂದಷ್ಟೇ ಪ್ರಯಾಗರಾಜನ ಕುಂಭಮೇಳಕ್ಕೆ ತೆರಳಿದ್ದ ಗೋಕಾಕದ ನಾಲ್ವರು ಜನ ಸೇರಿ ಆರು ಜನ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿರುವ ಘಟನೆ ಮಧ್ಯಪ್ರದೇಶದ ಜಬಲಪುರ ಜಿಲ್ಲೆಯ ಶಿವೊರಿ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಪ್ರಯಾಗರಾಜ್‌ದಿಂದ ತೂಫಾನ ಕ್ರೂಸರ್ ವಾಹನದಲ್ಲಿ ಜಬಲಪುರಗೆ ತೆರಳುವಾಗ ಬೆಳಿಗ್ಗೆ ೬ಗಂಟೆಗೆ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿಯಾಗಿ ಈ ದುರ್ಘಟನೆ ನಡೆದಿದೆ ಎಂದು ತಿಳಿದುಬಂದಿದೆ.
ಮೃತರನ್ನು ಲಕ್ಷ್ಮೀ ಬಡಾವಣೆ ನಿವಾಸಿ ಬಾಲಚಂದ್ರ ಗೌಡರ(೫೦), ಗುರುವಾರ ಪೇಟ ನಿವಾಸಿ ವಿರುಪಾಕ್ಷ ಗುಮತಿ(೬೧), ಗೊಂಬಿಗುಡಿ ಹತ್ತಿರದ ನಿವಾಸಿ ಬಸವರಾಜ್ ಕುರಟ್ಟಿ(೬೩), ಗುರುವಾರ ಪೇಟ ನಿವಾಸಿ ಕೆಎಸ್‌ಆರ್‌ಟಿಸಿ ಡ್ರೈವರ್ ಬಸವರಾಜ್ ದೊಡಮನಿ(೪೯), ಹುಕ್ಕೇರಿ ತಾಲೂಕಿನ ಆನಂದಪುರ ಗ್ರಾಮದ ನಿವಾಸಿ ಸುನೀಲ್ ಶೇಡಶ್ಯಾಳೆ(೪೫), ಬಾಗಲಕೋಟೆ ಜಿಲ್ಲೆ ಗುಳೇದಗುಡ್ಡ ನಿವಾಸಿ ಈರಣ್ಣ ಶೇಬಿನಕಟ್ಟಿ(೨೭) ಎಂದು ತಿಳಿದು ಬಂದಿದೆ. ಗಂಭೀರ ಗಾಯಗೊಂಡ ಮುಸ್ತಾಕ ಕಿಲ್ಲೇದಾರ, ಸದಾಶಿವ ಉಪದಲಿ ಎಂಬುವರನ್ನು ಹೆಚ್ಚಿನ ಚಿಕಿತ್ಸೆಗೆ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಒಟ್ಟು ೮ ಜನ ಸೇರಿ ಕಳೆದ ೧೮ ರಂದು ಪ್ರಯಾಗರಾಜನಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ ಭಾಗವಹಿಸಲು ತೆರಳಿದ್ದರು. ರವಿವಾರದಂದು ತಮ್ಮ ತಮ್ಮ ಮನೆಗಳಿಗೆ ಫೋನ್ ಮುಖಾಂತರ ಮಾತನಾಡಿ ಸೋಮವಾರ ಕುಂಭಮೇಳದಲ್ಲಿ ತೀರ್ಥ ಸ್ನಾನ ಮಾಡಿ ಮರಳುವುದಾಗಿ ತಿಳಿಸಿದ್ದಾರೆ. ಮುಸ್ತಾಕ ಕಿಲ್ಲೇದಾರ ಹೊರತುಪಡಿಸಿ ಮೃತ ೬ಜನ ಗಾಯಾಳು ಸದಾಶಿವ ಉಪದಲಿ ಸೇರಿ ಎಲ್ಲರೂ ಸಂಬಂಧಿಕರಾಗಿದ್ದಾರೆ.
ಪ್ರಯಾಗರಾಜ ಕುಂಭಮೇಳಕ್ಕೆ ತೆರಳಿದ ೬ಜನ ವಾಹನ ಅಪಘಾತದಲ್ಲಿ ಸಾವಿನಪ್ಪಿರುವ ಘಟನೆ ನಡೆದಿರುವ ಸುದ್ದಿ ತಿಳಿಯುತ್ತಿದ್ದಂತೆ ಶಾಸಕ ರಮೇಶ ಜಾರಕಿಹೊಳಿ ಅವರು, ಮಧ್ಯಪ್ರದೇಶದ ಪೋಲಿಸ್ ಅಧಿಕಾರಿಗಳೊಂದಿಗೆ ದೂರವಾಣಿ ಮುಖಾಂತರ ಮಾತನಾಡಿ, ಮೃತರ ಶವಪರೀಕ್ಷೆ ನಡೆಸಿ ಆದಷ್ಟು ಬೇಗ ಮೃತರ ಪಾರ್ಥಿವ ಶರೀರ ನಗರಕ್ಕೆ ಕಳುಹಿಸಲು ವ್ಯವಸ್ಥೆ ಮಾಡಿಕೋಡುವಂತೆ ಮನವಿ ಮಾಡಿದ್ದಾರೆ. ಮಂಗಳವಾರ ಸಂಜೆ ಮೃತರ ಪಾರ್ಥಿವ ಶರೀರ ನಗರಕ್ಕೆ ಆಗಮಿಸಲಿವೆ.
ಮೃತರ ಕುಟುಂಬಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ, ಶಾಸಕರುಗಳಾದ ರಮೇಶ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ ತೀವ್ರ ಸಂತಾಪ ಸೂಚಿಸಿದ್ದು, ಮೃತರ ಆತ್ಮಕ್ಕೆ ಭಗವಂತ ಸದ್ಗತಿ ಕರುಣಿಸಲಿ, ಅವರ ಕುಟುಂಬವರ್ಗಕ್ಕೆ ನೋವನ್ನು ಭರಿಸುವ ಶಕ್ತಿಯನ್ನು ದೇವರು ನೀಡಲಿ ಪ್ರಾರ್ಥಿಸಿದ್ದಾರೆ.

Previous articleಸರ್ವರೂ ಒಂದೇ ಎಂಬ ಭಾವನೆಯೇ ಪ್ರಸಿದ್ಧಿಗೆ ಕಾರಣ
Next articleಭೀಕರ ಅಪಘಾತ: ಕುಂಭಮೇಳಕ್ಕೆ ತೆರಳುತ್ತಿದ್ದ ಗೋಕಾಕ್‌ನ ಆರು ಮಂದಿ ಸಾವು