ದಾವಣಗೆರೆ: ಪಡಿತರದಾರರಿಗೆ ವಿತರಿಸುವ ಪಡಿತರ ಅಕ್ಕಿಯನ್ನು ಕಾಳಸಂತೆಯಲ್ಲಿ ಮಾಡಲು ಸಾಗಣೆ ಮಾಡುತ್ತಿದ್ದಾಗ ಆಹಾರ ನಿರೀಕ್ಷಕರು ದಾಳಿ ನಡೆಸಿ ಲಾರಿ ಸಮೇತ ೩೬೧ ಚೀಲ ಪಡಿತರ ಅಕ್ಕಿಯನ್ನು ಮಲೇಬೆನ್ನೂರು ಠಾಣೆಗೆ ಭಾನುವಾರ ಒಪ್ಪಿಸಿದ್ದಾರೆ.
ಹರಿಹರ ತಾಲೂಕಿನ ವಾಸನ ಗ್ರಾಮದಲ್ಲಿ ಅಕ್ರಮವಾಗಿ ಸಾರ್ವಜನಿಕರಿಗೆ ವಿತರಿಸುವ ಪಡಿತರ ಅಕ್ಕಿಯನ್ನು ಹೆಚ್ಚಿನ ದರಕ್ಕೆ ಕಾಳಸಂತೆಯಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದು ಖಾಸಗಿ ಬಾತ್ಮಿದಾರರಿಂದ ಖಚಿತ ಮಾಹಿತಿ ಬಂದಿದೆ ಎಂದು ಮಲೇಬೆನ್ನೂರು ಠಾಣೆ ಪಿಎಸ್‌ಐ ತಹಶೀಲ್ದಾರ್‌ಗೆ ಮಾಹಿತಿ ನೀಡಿದ್ದರು.
ತಹಸೀಲ್ದಾರ್ ಕೂಡಲೇ ಹರಿಹರ ತಾಲೂಕು ಆಹಾರ ನಿರೀಕ್ಷಕ ಎಸ್.ಬಿ. ಶಿವಕುಮಾರ್ ಅವರಿಗೆ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ವರದಿ ನೀಡುವಂತೆ ಸೂಚನೆ ನೀಡಿದ್ದರು.
ಆಹಾರ ನಿರೀಕ್ಷಕ ಎಸ್.ಬಿ. ಶಿವಕುಮಾರ್, ವಾಸನ ಗ್ರಾಮಕ್ಕೆ ಭೇಟಿ ನೀಡಿ ಲಾರಿಯಲ್ಲಿ ಅಕ್ಕಿ ಚೀಲಗಳನ್ನು ತುಂಬಿಕೊಂಡು ಸಾಗಾಣಿಕೆ ಮಾಡುತ್ತಿದ್ದ ಲಾರಿಯನ್ನು ವಶಕ್ಕೆ ಪಡೆದು, ಲಾರಿ ಚಾಲಕನಿಗೆ ಅಕ್ಕಿ ಚೀಲಗಳಿಗೆ ಸಂಬಂಧಿಸಿದಂತೆ ಬಿಲ್ ಕೇಳಿದಾಗ ಚಾಲಕ ಯಾವುದೇ ಬಿಲ್ ಹಾಜರುಪಡಿಸಲಿಲ್ಲ. ಆದ್ದರಿಂದ ಮಲೇಬೆನ್ನೂರು ಪೊಲೀಸ್ ಠಾಣೆಗೆ ಲೋಡ್ ಸಮೇತ ಲಾರಿಯನ್ನು ಒಪ್ಪಿಸಿದ್ದರು.
ಪೊಲೀಸರು ಲಾರಿ ಪರಿಶೀಲನೆ ನಡೆಸಿದಾಗ ಲಾರಿಯಲ್ಲಿ ಪಡಿತರಿಗೆ ವಿತರಿಸುವ ಸುಮಾರು ೫೦ ಕೆ.ಜಿ ತೂಕವಿರುವ ೩೬೧ ಚೀಲಗಳು ಇದ್ದವು. ಅಕ್ಕಿಚೀಲಗಳು ಗೋದಾಮಿನಿಂದ ವಿತರಿಸಿರುವ ಬಗ್ಗೆ ಆಹಾರ ನಿರೀಕ್ಷಕ ಶಿವಕುಮಾರ್, ಶಿರಸ್ತೇದಾರ ಎಚ್.ಸಿ.ಮಂಜುನಾಥ್, ಹರಿಹರ ತಾಲ್ಲೂಕು ಕಚೇರಿಗೆ ಕೆಎಫ್‌ಸಿಎಸ್‌ಸಿ ವ್ಯವಸ್ಥಾಪಕ ಬಿ.ಎಸ್. ನಡುವಿನಮನಿ ಹಾಗೂ ಚಿಲ್ಲರೆ ಸಾಗಾಣಿಕೆ ಗುತ್ತಿಗೆದಾರ ಎಚ್.ಎಂ.ಶಶಿಧರ್ ಅವರನ್ನು ಕರೆಯಿಸಿ ವಿಚಾರಿಸಿದರು. ಈ ವೇಳೆ ಲಾರಿಯಲ್ಲಿ ೧೭೯ ಕ್ವಿಂಟಲ್ ೭೫ ಕೆ.ಜಿ. ಅಕ್ಕಿಯನ್ನು ವಾಸನ ಗ್ರಾಮದಲ್ಲಿರುವ ವಿಎಸ್‌ಎಸ್‌ಎನ್ ನ್ಯಾಯಬೆಲೆ ಅಂಗಡಿಗೆ ಏಪ್ರಿಲ್ ತಿಂಗಳ ಪಡಿತರ ವಿತರಣೆಗೆ ಕಳುಹಿಸಿದ ಬಗ್ಗೆ ಹೇಳಿಕೆ ನೀಡಿ, ಸಂಬಂಧಪಟ್ಟ ಬಿಲ್ ಹಾಜರುಪಡಿಸಿದ್ದಾರೆ.
ವಾಸನ ಗ್ರಾಮದಲ್ಲಿರುವ ವಿಎಸ್‌ಎಸ್‌ಎನ್ ನ್ಯಾಯಬೆಲೆ ಅಂಗಡಿಗೆ ಏಪ್ರಿಲ್ ತಿಂಗಳ ಪಡಿತರ ವಿತರಣೆಗೆ ಹೋಗುವ ಅಕ್ಕಿಯಾಗಿದೆ ಎಂದು ಆಹಾರ ನಿರೀಕ್ಷಕ ಶಿವಕುಮಾರ್, ತಹಶೀಲ್ದಾರ್ ಮತ್ತು ಪೊಲೀಸ್ ಉಪನಿರೀಕ್ಷಕರಿಗೆ ವರದಿ ನೀಡಿದ್ದಾರೆ.
ಈ ಬಗ್ಗೆ ಏ. 17ರಂದು ವಾಸನ ವಿಎಸ್‌ಎಸ್‌ಎನ್ ನ್ಯಾಯಬೆಲೆ ಅಂಗಡಿಯ ಕಾರ್ಯದರ್ಶಿ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ನ್ಯಾಯಬೆಲೆ ಅಂಗಡಿಗೆ ಬರಬೇಕಾದ ಏಪ್ರಿಲ್ ತಿಂಗಳ ಪಡಿತರ ಅಕ್ಕಿ ತಲುಪಿದ ಬಗ್ಗೆ ವಿಚಾರಿಸಿದಾಗ ಅಂಗಡಿಗೆ ಯಾವುದೇ ಅಕ್ಕಿ ಬಂದಿಲ್ಲ ಎಂದು ತಿಳಿಸಿದ್ದಾರೆ.
ಹರಿಹರ ತಾಲೂಕಿನ ಚಿಲ್ಲರೆ ಸಾಗಾಣಿಕೆ ಗುತ್ತಿಗೆದಾರರ ಲಾರಿಯಾಗಿದ್ದು, ಕೆಎಫ್‌ಸಿಎಸ್‌ಸಿಯಿಂದ ಪಡಿತರ ವಸ್ತುಗಳನ್ನು ನ್ಯಾಯಬೆಲೆ ಅಂಗಡಿಗೆ ತಲುಪಿಸುವ ಲಾರಿಯಾಗಿದೆ. ಆದರೆ ವಾಸನ ಗ್ರಾಮದಲ್ಲಿರುವ ನ್ಯಾಯಬೆಲೆ ಅಂಗಡಿಗೆ ತಲುಪಬೇಕಿದ್ದ ಪಡಿತರ ಅಕ್ಕಿ ಕಾಳಸಂತೆಯಲ್ಲಿ ಮಾಡುವ ಉದ್ದೇಶವಿದೆ ಎಂದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ಆಹಾರ ನಿರೀಕ್ಷಕ ಶಿವಕುಮಾರ್ ಹರಿಹರ ತಾಲೂಕು ಚಿಲ್ಲರೆ ಸಾಗಾಣಿಕೆ ಗುತ್ತಿಗೆದಾರ ಮತ್ತು ಲಾರಿಯ ಚಾಲಕನ ವಿರುದ್ಧ ಕಾನೂನು ಕ್ರಮ ಜರುಗಿಸಿ ಎಂದ ಮಲೇಬೆನ್ನೂರು ಠಾಣೆಗೆ ದೂರು ದಾಖಲಿಸಿದ್ದಾರೆ.