ಗೋಕರ್ಣ: ಸಮುದ್ರದ ಅಂಚಿನ ಬಂಡೆಯ ಮೇಲೆ ನಿಂತಿದ್ದ ಪ್ರವಾಸಿಗ ಕಾಲುಜಾರಿ ನೀರಿಗೆ ಬಿದ್ದ ಪರಿಣಾಮ ಅಸ್ವಸ್ಥಗೊಂಡು ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ ಮೃತಪಟ್ಟ ಘಟನೆ ರವಿವಾರ ಮಧ್ಯಾಹ್ನ ನಡೆದಿದೆ.
ಆಂಧ್ರಪ್ರದೇಶ ಮೂಲದ ಬೆಂಗಳೂರಿನಲ್ಲಿರುವ ಸಾಯಿನಾಥ ಕೆ. ಶರ್ಮಾ(೨೮) ಮೃತಪಟ್ಟ ವ್ಯಕ್ತಿ. ಇಲ್ಲಿ ಪ್ಯಾರಡೈಸ್ ಬೀಚ್‌ನಲ್ಲಿ ಬೆಂಗಳೂರಿನಿಂದ ಬಂದ ಮೂವರು ಪ್ರವಾಸಿಗರು ಕಡಲ ಅಂಚಿನಲ್ಲಿ ಆಟವಾಡಲು ತೆರಳಿದ್ದು, ಈ ವೇಳೆ ಓರ್ವ ಬಂಡೆಯ ಮೇಲೆ ನಿಂತಾಗ ಆಯತಪ್ಪಿ ನೀರಿಗೆ ಬಿದ್ದಿದ್ದಾನೆ. ಇವರನ್ನು ಪ್ರವಾಸಿ ಬೋಟ್‌ನವರು ರಕ್ಷಿಸಿ ಬೋಟ್‌ನಲ್ಲಿ ಓಂ ಕಡಲತೀರಕ್ಕೆ ತಂದಿದ್ದರು, ಇಲ್ಲಿ ಕರ್ತವ್ಯ ನಿರ್ವಹಿಸುವ ಜೀವರಕ್ಷಕ ಸಿಬ್ಬಂದಿ ಪ್ರಥಮ ಚಿಕಿತ್ಸೆ ನೀಡುತ್ತಾ ಅಂಬ್ಯುಲೆನ್ಸ್ ಮೂಲಕ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸಾಗಿಸಿದ್ದರಾದರೂ ಮಾರ್ಗ ಮಧ್ಯದಲ್ಲಿ ಮೃತಪಟ್ಟಿದ್ದಾನೆ. ಮೃತ ಯುವಕ ಸೇರಿ ಒಟ್ಟು ಮೂವರು ಪ್ರವಾಸಕ್ಕೆ ಬಂದಿದ್ದರು ಎಂದು ತಿಳಿದು ಬಂದಿದೆ. ಈ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.