ಕಾಲಕಾಲೇಶ್ವರ ರಥೋತ್ಸವ

0
11

ಗಜೇಂದ್ರಗಡ: ಸಮೀಪದ ಸುಕ್ಷೇತ್ರ ದಕ್ಷಿಣ ಕಾಶಿ ಎಂದು ಪ್ರಸಿದ್ಧಿ ಪಡೆದ ಕಾಲಕಾಲೇಶ್ವರ ದೇವರ ಜಾತ್ರಾ ಮಹೋತ್ಸವದ ಪ್ರಯುಕ್ತ ಮಂಗಳವಾರ ಸಂಜೆ ಸಕಲ ವ್ಯಾದ ವೈಭವ, ಅಸಂಖ್ಯಾತ ಸದ್ಭಕ್ತರ ಮಧ್ಯೆ ರಥೋತ್ಸವವು ವಿಜೃಂಭಣೆಯಿಂದ ಜರುಗಿತು.
ದವನದ ಹುಣ್ಣಿಮೆಯಂದು ವಿಶೇಷ ಪೂಜೆಯೊಂದಿಗೆ ಉತ್ಸವ ಮೂರ್ತಿಗೆ ದವನಾರ್ಪಣೆ, ತೆಂಗಿನಕಾಯಿ, ಉತ್ತತ್ತಿ, ಬಾಳೆಹಣ್ಣು, ಕಬ್ಬು ದವಸ-ಧಾನ್ಯ ಸಮರ್ಪಿಸಿದ ನಂತರ ಪಲ್ಲಕ್ಕಿ ಸೇವೆ ಹಾಗೂ ದುರ್ಗಾದೇವಿ ವಿಶೇಷ ಪೂಜೆಯೊಂದಿಗೆ ರಥದಲ್ಲಿ ಸ್ವಾಮಿಯ ಉತ್ಸವ ಮೂರ್ತಿ ಪ್ರತಿಷ್ಠಾಪಿಸಿದ ಬಳಿಕ ಸಂಜೆ ಬಾನಂಗಳದಲ್ಲಿ ನಕ್ಷತ್ರ ಕಾಣಿಸಿಕೊಳ್ಳುತ್ತಿದ್ದಂತೆಯೇ ಮಹಾರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಸಕಲ ಭಕ್ತರು ಶಂಭೋಲಿಂಗ ಹರ-ಹರ ಮಹಾದೇವ ಎಂದು ಘೋಷಣೆ ಹಾಕುತ್ತಾ ರಥವನ್ನು ಭಕ್ತಿಯಿಂದ ಎಳೆದರು. ಜಾತ್ರೆ ಪಾದಯಾತ್ರೆ ಮೂಲಕ ಆಗಮಿಸುತ್ತಿದ್ದ ಭಕ್ತರಿಗೆ ರಸ್ತೆ ಪಕ್ಕದ ಕೆಲ ಹೊಲದ ಮಾಲಿಕರು, ಪಟ್ಟಣದ ವಿವಿಧ ಸಂಘ ಸಂಸ್ಥೆಗಳಿಂದ ಆರಂಭಿಸಿದ್ದ ನೀರಿನ ಅರವಟಿಗೆಗಳು ಭಕ್ತರ ನೀರಿನ ದಾಹ ನೀಗಿಸಿದ್ದು ವಿಶೇಷ. ಪಟ್ಟಣದ ದುರ್ಗಾ ವೃತ್ತದಿಂದಲೇ ಟಂಟಂ ವಾಹನದವರು ಭಕ್ತರನ್ನು ಕಾಲಕಾಲೇಶ್ವರ ಜಾತ್ರೆಗೆ ರಿಯಾಯತಿಯಲ್ಲಿ ಕರೆದುಕೊಂಡಲು ಹೋಗಲು ಸ್ಪರ್ಧೆಗೆ ಇಳಿದಂತೆ ಕಂಡಿದ್ದರಿಂದ ರಾಜೂರು ಮಾರ್ಗ ಹಾಗೂ ಪುರ್ತಗೇರಿ ಕ್ರಾಸ್‌ನಲ್ಲಿ ವಾಹನ ದಟ್ಟಣೆ ಹೆಚ್ಚಾದ ಪರಿಣಾಮ ಒಂದು ಕಿಲೋ ಮೀಟರ್ ದೂರದಲ್ಲಿಯೇ ಪೊಲೀಸ್ ಅಧಿಕಾರಿಗಳು ವಾಹನ ಪಾರ್ಕಿಂಗ್ ವ್ಯವಸ್ಥೆ ಮಾಡಿದ್ದರು. ರಾಜ್ಯದ ವಿವಿಧೆಡೆಯಿಂದ ಭಕ್ತರು ಎತ್ತಿನ ಚಕ್ಕಡಿ, ಟಂಟಂ, ಲಾರಿ, ಟೆಂಪೂ ವಾಹನಗಳ ಮೂಲಕ ಬಂದು ಕಾಲಕಾಲೇಶ್ವರನ ದರ್ಶನ ಪಡೆದರು.

Previous articleಬಿಜೆಪಿಯವರು ರಾಜಕಾರಣ ಕುಲಗೇಡಿಸುತ್ತಿದ್ದಾರೆ
Next articleಡೇಂಜರ್, ಪಿಕ್ ಪಾಕೆಟ್ ಬಿಜೆಪಿ ಸಂಸ್ಕೃತಿ