ಕಾರ್ಮಿಕನಿಗೆ ಷೇರು ಮಾರುಕಟ್ಟೆಯಲ್ಲಿ ₹12.31 ಲಕ್ಷ ವಂಚನೆ

ಕಲಬುರಗಿ: ಆನ್‌ಲೈನ್‌ನಲ್ಲಿ ಷೇರು ಮಾರುಕಟ್ಟೆಯ ಹೂಡಿಕೆಯನ್ನು ತ್ವರಿತವಾಗಿ ಕಲಿತು ಹೆಚ್ಚಿನ ಲಾಂಭಾಂಶ ಗಳಿಸುವಂತೆ ಸಿಮೆಂಟ್ ಕಾರ್ಖಾನೆ ಕಾರ್ಮಿಕರೊಬ್ಬರಿಗೆ ಆಮಿಷವೊಡ್ಡಿ, ಆತನಿಂದ ೧೨.೩೧ ಲಕ್ಷ ಪಡೆದು ವಂಚಿಸಿದ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಅಲ್ಪಾಟೆಕ್ ಸಿಮೆಂಟ್ ಕಾರ್ಖಾನೆ ಕಾರ್ಮಿಕ, ಮಧ್ಯಪ್ರದೇಶ ಮೂಲದ ನವನೀತ್ ಸುಂದರಲಾಲ್ ಹಣ ಕಳೆದುಕೊಂಡಿದ್ದಾನೆ. ಇನ್‌ಸ್ಟಾಗ್ರಾಮ್‌ನಲ್ಲಿ ತ್ವರಿತವಾಗಿ ಷೇರು ಮಾರುಕಟ್ಟೆ ಕಲಿಯಿರಿ ಎಂಬ ಜಾಹೀರಾತಿಗೆ ನವನೀತ್ ಆಕರ್ಷಿತನಾಗಿ ಜಾಹೀರಾತಿನಲ್ಲಿ ಸೂಚಿಸಿದ್ದ ಲಿಂಕ್ ಕ್ಲಿಕ್ ಮಾಡಿದ ಬಳಿಕ ವಾಟ್ಸ್ ಆಪ್ ಗ್ರೂಪ್‌ಗೂ ಸೇರಿದ್ದಾನೆ. ಗ್ರೂಪ್‌ನಲ್ಲಿದ್ದ ಸದಸ್ಯರು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದ್ದರಿಂದ ತಮಗೂ ಲಾಭವಾಗಿದೆ ಎಂಬ ಮೆಸೇಜ್ ಹಾಕಿದರು. ಅದನ್ನು ನಂಬಿ, ವಂಚಕರು ಸೂಚಿಸಿದ ಆ್ಯಪ್ ಅನ್ನು ನವನೀತ್ ಡೌನ್‌ಲೋಡ್ ಸಹ ಮಾಡಿಕೊಂಡಿದ್ದಾನೆ.
ಆ್ಯಪ್‌ನಲ್ಲಿ ಆರಂಭದಲ್ಲಿ ೧೦ ಸಾವಿರ ಹೂಡಿಕೆ ಮಾಡಿದ್ದು, ಲಾಭಾಂಶದ ಹಣ ಎಂಬಂತೆ ೬೦ ಸಾವಿರ ತೋರಿಸಿ ವಿಶ್ವಾಸ ಮೂಡಿಸಿದ್ದರು. ಇದನ್ನು ನಂಬಿ ಹಂತ- ಹಂತವಾಗಿ ೧೨.೩೧ ಲಕ್ಷ ಹೂಡಿಕೆ ಮಾಡಿದ್ದನು. ಲಾಭದ ಹಣ ಎಂಬಂತೆ ೨೫ ಲಕ್ಷ ಸಹ ತೋರಿಸಿದ್ದಾರೆ. ಹೂಡಿಕೆ ಮತ್ತು ಲಾಭದ ಹಣ ಹಿಂಪಡೆಯಲು ಯತ್ನಿಸಿ ವಿಫಲನಾಗಿದ್ದು, ಕೆಲ ದಿನಗಳ ಬಳಿಕ ಆ್ಯಪ್ ಸಹ ತೆರೆದುಕೊಳ್ಳಲಿಲ್ಲ. ಆ ಬಳಿಕ ವಂಚನೆಗೊಂಡಿರುವುದು ಗೊತ್ತಾಗಿದೆ ಎಂದು ನವನೀತ್ ಮಳಖೇಡ ಠಾಣೆಯಲ್ಲಿ ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದಾರೆ.