ಕಾರಾಗೃಹದಲ್ಲಿ ಅಪ್ಪನ ಸೆಲ್‌ನಲ್ಲೇ ಪ್ರಜ್ವಲ್ ವಾಸ

0
8

ಬೆಂಗಳೂರು: ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಎದುರಿಸುತ್ತಿರುವ ಪ್ರಜ್ವಲ್ ರೇವಣ್ಣ ಅವರು ಅಪ್ಪ ಸೆರೆವಾಸ ಅನುಭವಿಸಿದ್ದ ಸೆಲ್ (ಜೈಲು ಕೊಠಡಿ) ವಾಸಿಯಾಗಿದ್ದಾರೆ.
ಹೊಳೆನರಸೀಪುರ ನಗರ ಠಾಣೆಯಲ್ಲಿ ದಾಖಲಾಗಿರುವ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಎಸ್‌ಐಟಿ ವಶದಲ್ಲಿದ್ದ ಪ್ರಜ್ವಲ್ ರೇವಣ್ಣಗೆ ನ್ಯಾಯಾಲಯ ಹದಿನಾಲ್ಕು ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದ ಬೆನ್ನಲ್ಲೇ ಕೇಂದ್ರೀಯ ಕಾರಾಗೃಹದಲ್ಲಿ ಅಪ್ಪ ತಂಗಿದ್ದ ಸೆಲ್‌ನಲ್ಲಿ ಮಗನನ್ನೂ ಇರಿಸಲಾಗಿದೆ.
ಮೇ ೩೧ರಂದು ವಿದೇಶದಿಂದ ಭಾರತಕ್ಕೆ ಬರುತ್ತಿದ್ದಂತೆ ಸಿಐಡಿಯ ವಿಶೇಷ ತನಿಖಾ ತಂಡದಿಂದ ಬಂಧಿಸಲ್ಪಟ್ಟ ಪ್ರಜ್ವಲ್ ರೇವಣ್ಣ ಅವರನ್ನು ನ್ಯಾಯಾಲಯ ಒಮ್ಮೆ ೬ ದಿನ, ಮತ್ತೊಮ್ಮೆ ೪ ದಿನ ವಿಚಾರಣೆಗಾಗಿ ಎಸ್‌ಐಟಿ ವಶಕ್ಕೆ ನೀಡಿತ್ತು. ಪೊಲೀಸ್ ಕಸ್ಟಡಿ ಮುಗಿದ ಹಿನ್ನೆಲೆಯಲ್ಲಿ ಸೋಮವಾರ ಎಸ್‌ಐಟಿ ಪೊಲೀಸರು ಪ್ರಜ್ವಲ್ ಅವರನ್ನು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಮುಂದೆ ಹಾಜರುಪಡಿಸಿದರು.
ಈ ವೇಳೆ ಪ್ರಕರಣದ ವಿಚಾರಣೆಯಲ್ಲಿ ಪ್ರಜ್ವಲ್ ಅಸಹಕಾರ ನೀಡಿದ್ದು ಹತ್ತು ದಿನಗಳ ಪೊಲೀಸ್ ಕಸ್ಟಡಿಯ ಪೈಕಿ ಎರಡು ದಿನ ವೈದ್ಯಕೀಯ ಪರೀಕ್ಷೆಗಾಗಿ ವ್ಯಯವಾಗಿದೆ. ಪೊಲೀಸರ ಪ್ರಶ್ನೆಗಳಿಗೆ ಪ್ರಜ್ವಲ್ ಸಮರ್ಪಕ ಉತ್ತರ ನೀಡುತ್ತಿಲ್ಲ. ಹೆಚ್ಚಿನ ವಿಚಾರಣೆಗಾಗಿ ಅವರನ್ನು ಮತ್ತೆ ಪೊಲೀಸ್ ಕಸ್ಟಡಿಗೆ ನೀಡಬೇಕೆಂದು ಎಸ್‌ಐಟಿ ಪರ ವಕೀಲರು ಮನವಿ ಮಾಡಿದರು. ಆದರೆ, ಈ ಮನವಿಯನ್ನು ತಿರಸ್ಕರಿಸಿದ ನ್ಯಾಯಾಧೀಶರು, ಜೂನ್ ೨೪ರವರೆಗೆ ಪ್ರಜ್ವಲ್‌ರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶಿಸಿತು. ಈ ತೀರ್ಪು ಹೊರಬೀಳುತ್ತಿದ್ದಂತೆಯೇ ಪೊಲೀಸರು ನ್ಯಾಯಾಲಯದಿಂದಲೇ ನೇರಾ ಪರಪ್ಪನ ಅಗ್ರಹಾರದ ಕಾರಾಗೃಹಕ್ಕೆ ಕರೆದೊಯ್ದರು.

Previous articleಗ್ಯಾರಂಟಿಗಳನ್ನು ನಿಲ್ಲಿಸುವುದಿಲ್ಲ
Next articleವಿನಯ್ ಕುಲಕರ್ಣಿಗೆ ಹಿನ್ನಡೆ