ಕಾರವಾರ: ರಾಷ್ಟ್ರೀಯ ತನಿಖಾ ದಳ(ಎನ್‌ಐಎ)ದ ಅಧಿಕಾರಿಗಳ ತಂಡವೊಂದು ನಗರದಲ್ಲಿ ಬೀಡುಬಿಟ್ಟಿದ್ದು, ಭೇಟಿಯ ಸಣ್ಣ ಸುಳಿವನ್ನೂ ಬಿಟ್ಟುಕೊಡದೆ ಯಾವುದೋ ಪ್ರಕರಣದ ಸಂಬಂಧ ಗುಪ್ತವಾಗಿ ಮಾಹಿತಿ ಕಲೆಹಾಕುತ್ತಿರುವ ಬಗ್ಗೆ ಗೊತ್ತಾಗಿದೆ.
ಎನ್‌ಐಎ ಮೂವರು ಡಿವೈಎಸ್ಪಿ ಸೇರಿ ಒಟ್ಟು ೬ ಅಧಿಕಾರಿಗಳನ್ನೊಳಗೊಂಡ ತಂಡ ಸೋಮವಾರ ಬೆಳಗ್ಗೆಯಿಂದ ರಾತ್ರಿವರೆಗೂ ನಗರ ಠಾಣೆಯಲ್ಲಿ ಬೀಡುಬಿಟ್ಟು ದಾಖಲಾತಿಗಳ ಸಂಗ್ರಹಣೆ ನಡೆಸುತ್ತಿದೆ. ಪೊಲೀಸರಿಗೂ ಸಣ್ಣ ಮಾಹಿತಿ ನೀಡದೇ ಗುಪ್ತವಾಗಿ ಕಾರ್ಯನಿರ್ವಹಿಸುತ್ತಿರುವ ತಂಡ ದೇಶದ್ರೋಹಿ ಚಟುವಟಿಕೆಯ ಪ್ರಕರಣವೊಂದರ ಜಾಡು ಹಿಡಿದು ದಾಳಿ ಸಂಬಂಧ ಸಿದ್ಧತೆ ನಡೆಸಿದೆ ಎನ್ನಲಾಗುತ್ತಿದೆ.
ನಗರಸಭೆ ನೌಕರರನ್ನು ಪಂಚರನ್ನಾಗಿ ಜೊತೆಗೆ ಇರಿಸಿಕೊಂಡಿರುವ ತಂಡ ದಾಳಿ ವೇಳೆ ತಕ್ಷಣಕ್ಕೆ ಪ್ರಕರಣ ದಾಖಲಿಸಿಕೊಳ್ಳಲು ನೆರವಾಗಲೂ ಈ ರೀತಿ ಸನ್ನದ್ಧವಾಗಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಐಎನ್‌ಎಸ್ ಕದಂಬ ನೌಕಾನೆಲೆಯಲ್ಲಿನ ಮಾಹಿತಿ ಸೋರಿಕೆ ವಿಚಾರವಾಗಿ ೨೦೨೪ರಲ್ಲಿ ಆಗಸ್ಟ್ ತಿಂಗಳಲ್ಲಿ ಕಾರವಾರಕ್ಕೆ ಆಗಮಿಸಿದ್ದ ಎನ್‌ಐಎ ತಂಡ ಸ್ಥಳೀಯ ಮೂವರನ್ನು ವಿಚಾರಣೆ ನಡೆಸಿ ಬಿಡುಗಡೆ ಮಾಡಿತ್ತು. ಇದೀಗ ಇದೇ ವಿಷಯಕ್ಕೆ ಮತ್ತೆ ತನಿಖೆ ನಡೆಸಲು ಆಗಮಿಸಿದೆಯೇ ಅಥವಾ ವಿಚಾರಣೆ ನಡೆಸಿದ್ದ ಮೂವರಂತೆ ಮತ್ತೆ ಇನ್ಯಾರದ್ದಾದರೂ ಇರುವ ಬಗ್ಗೆ ಜಾಡು ಹಿಡಿದು ಬಂದಿರುವ ಸಾಧ್ಯತೆಯೂ ಇದೆ ಎನ್ನಲಾಗಿದೆ.
ಪಾಕಿಸ್ತಾನಿ ಏಜೆಂಟ್ ಒಬ್ಬಳು ತಾನು ಮರೈನ್ ಅಧಿಕಾರಿ ಎಂದು ಹನಿಟ್ರ್ಯಾಪ್ ಮೂಲಕ ಈ ಹಿಂದೆ ವಿಚಾರಣೆ ನಡೆಸಿದ್ದ ಸ್ಥಳೀಯ ಮೂವರಿಂದ ಮಾಹಿತಿ ಕಲೆ ಹಾಕಿದ್ದಳು. ಸಂಪೂರ್ಣ ಮಾಹಿತಿ ಪಡೆದ ಬಳಿಕವೇ ಪಾಕಿಸ್ತಾನಿ ಏಜೆಂಟ್ ಮಹಿಳೆ ೨೦೨೩ರಲ್ಲಿ ಫ್ರೆಂಡ್ ರಿಕ್ವೆಸ್ಟ್ ನೀಡಿದ್ದಳು. ಈ ಮಾಹಿತಿ ನೀಡಿದ್ದಕ್ಕೆ ಏಜೆಂಟ್ ೮ ತಿಂಗಳ ಕಾಲ ತಲಾ ೫ ಸಾವಿರ ರೂ. ಹಣ ನೀಡಿದ್ದ ಬಗ್ಗೆ ಎನ್‌ಐಎ ತನಿಖೆ ವೇಳೆ ಬಹಿರಂಗಗೊಂಡಿತ್ತು. ಬಳಿಕ ರಾಷ್ಟ್ರವಿರೋಧಿ ಚಟುವಟಿಕೆಯಡಿ ಎನ್‌ಐಎ ಮೂವರನ್ನು ಬಂಧಿಸಿತ್ತು. ಈಗಲೂ ಇಂತಹದೇ ಪ್ರಕರಣಕ್ಕೆ ಸಂಬಂಧಿಸಿ ಇನ್ನಷ್ಟು ಶಂಕಿತರಿಗಾಗಿ ಹುಡುಕಾಟ ನಡೆಸಿಕೊಂಡು ಬಂದಿರುವ ಬಗ್ಗೆ ಸಂಶಯ ವ್ಯಕ್ತವಾಗಿದೆ.