ಕಾನೂನು ಪ್ರಕಾರ ಆರೋಪಿಗೆ ಕಠಿಣ ಶಿಕ್ಷೆ: ಕಮೀಶನರ್ ರೇಣುಕಾ ಭರವಸೆ

0
19

ಹುಬ್ಬಳ್ಳಿ : ನೇಹಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಆರೋಪಿಯನ್ನು ಬಂಧಿಸಲಾಗಿದೆ. ಕಾನೂನು ಪ್ರಕಾರ ಕಠಿಣ ಶಿಕ್ಷೆಯಾಗಲು ಎಲ್ಲ ಪ್ರಯತ್ನ ಮಾಡಲಾಗುವುದು. ಧರಣಿ ವಾಪಸ್ ಪಡೆಯಿರಿ ಎಂಬ ಕಮೀಶನರ್ ರೇಣುಕಾ ಸುಕುಮಾರ್ ಮನವಿ ಮೇರೆಗೆ ಎಬಿವಿಪಿ ಮುಖಂಡರು, ಕಾರ್ಯಕರ್ತರು, ವಿದ್ಯಾರ್ಥಿ- ವಿದ್ಯಾರ್ಥಿನಿಯರಿಗೆ ಮನವಿ ಮಾಡಿದರು.
ಆರೋಪಿಗೆ ಕಠಿಣ ಶಿಕ್ಷೆ ಎಂದು ಹೇಳಿದರೆ ಸಾಲದು. ಎನ್ ಕೌಂಟರ್ ಮಾಡಬೇಕು. ಹೀನ ಕೃತ್ಯ ಎಸಗಿದವನಿಗೆ ಕರುಣೆ ತೋರಿಸಬಾರದು. ಮೊದಲು ಅವನನ್ನು ಹೊಡೆದು ಹಾಕಿ ಎಂದು ಧರಣಿ ನಿರತರು ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಕಮೀಶನರ್ , ನಿಮ್ಮ ಭಾವನೆ ಅರ್ಥವಾಗುತ್ತದೆ.ಕಾನೂನು ಬಿಟ್ಟು ಏನೂ ಮಾಡುವುದಕ್ಕೆ ಸಾಧ್ಯವಿಲ್ಲ. ಆದರೆ, ಕಾನೂನು ಮಿತಿಯಲ್ಲಿ ಏನು ಕಠಿಣ ಶಿಕ್ಷೆಯಾಗಬೇಕೊ ಅದನ್ನು ಆಗಿಸಲು ಪ್ರಯತ್ನ ಮಾಡಲಾಗುವುದು. ಗೃಹ ಸಚಿವರೊಂದಿಗೂ ಈ ಕುರಿತು ಮಾಹಿತಿ ನೀಡಿ ಆದೇಶದ ಪ್ರಕಾರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಕಮೀಶನರ್ ಭರವಸೆ ಬಳಿಕ ಧರಣಿಯನ್ನು ಎಬಿವಿಪಿ ವಾಪಸ್ ಪಡೆಯಿತು.

ಎರಡು ತಾಸು ಹು- ಧಾ ಮುಖ್ಯ ರಸ್ತೆ ಬಂದ್: ಬಿವಿಬಿ ಕಾಲೇಜಿನ ಮುಂದಿನ ಹು- ಧಾ ಮುಖ್ಯ ರಸ್ತೆಯಲ್ಲಿಯೇ ಎಬಿವಿಪಿ ಪ್ರತಿಭಟನೆ ನಡೆಸಿದ್ದರಿಂದ ಈ ಮಾರ್ಗದಲ್ಲಿ ಸುಮಾರು ಎರಡು ತಾಸು ವಾಹನ ಸಂಚಾರ್ ಬಂದ್ ಆಗಿತ್ತು.
ಬೇರೆ ಮಾರ್ಗಗಳ ಮೂಲಕ ವಾಹನ ಸಂಚಾರಕ್ಕೆ ಪೊಲೀಸರು ವ್ಯವಸ್ಥೆ ಮಾಡಿದ್ದರು.

ಸಂಘಟನೆಗಳಿಂದ ಧರಣಿ : ನೇಹಾ ಹತ್ಯೆ ಖಂಡಿಸಿ ಹಿಂದೂ ಜಾಗರಣ ಸಮಿತಿ, ಕರ್ನಾಟಕ ದಲಿತ ವಿಮೋಚನಾ ಸಮಿತಿ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಬಿವಿಬಿ ಕಾಲೇಜಿನ ಮುಂದೆ ಧರಣಿ ನಡೆಸಿದರು.
ಆರೋಪಿಗೆ ಗಲ್ಲು ಶಿಕ್ಷೆಯಾಗಬೇಕು ಎಂದು ಹಿಂದೂ ಜಾಗರಣ ಸಮಿತಿ ಆಗ್ರಹಿಸಿತು.

Previous articleನೌಕಾಪಡೆಯ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ
Next articleನೇಹಾ ಹತ್ಯೆಗೆ ಬಿಕ್ಕಿ ಬಿಕ್ಕಿ ಅತ್ತ ಫಕೀರ ದಿಂಗಾಲೇಶ್ವರಶ್ರೀ