ಕಾರವಾರ: ಕರಾವಳಿಯಲ್ಲಿ ಬಿಸಿಲಿನ ತಾಪ ದಿನದಿಂದ ದಿನಕ್ಕೆ ಏರಿಕೆಯಾಗಿದ್ದು, ಕಾರವಾರದ ಸಾವಂತವಾಡದಲ್ಲಿ ಮತ್ತೆ ರಾಜ್ಯದಲ್ಲಿಯೇ ಗರಿಷ್ಠ ೪೨.೯ ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ.
ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿಗಾ ಕೇಂದ್ರದ ಬುಧವಾರದ ವರದಿಯಂತೆ ಕಳೆದ ೨೪ ಗಂಟೆಗಳಲ್ಲಿ ಉತ್ತರಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಹಲವು ಸ್ಥಳಗಳು ಮತ್ತು ಉಡುಪಿ ಮತ್ತು ಕೊಡಗು ಜಿಲ್ಲೆಗಳ ಪ್ರತ್ಯೇಕ ಸ್ಥಳಗಳಲ್ಲಿ ಗರಿಷ್ಠ ೩೮ ರಿಂದ ೪೦ ಡಿ.ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.
ಉತ್ತರ ಕನ್ನಡದ ದಾಂಡೇಲಿ, ಕಿನ್ನರ, ಘಾಡಸಾಯಿ, ಮಿರ್ಜಾನ್, ಪಾಳಾ, ಉಂಬ್ಳಮನೆ, ಸಾಂಬ್ರಾಣಿ, ಮುರ್ಕವಾಡ, ಭಟ್ಕಳ, ಅಂಕೋಲಾ, ಬೇಲೆಕೇರಿ, ಬೆಳಲೆ ಹಾಗೂ ದಕ್ಷಿಣ ಕನ್ನಡದ ೧೧, ಉಡುಪಿಯ ೨ ಹಾಗೂ ಕೊಡದಿನ ೧ ಸ್ಥಳದಲ್ಲಿ ೩೮-೪೦ ಡಿ.ಸೆ. ತಾಪಮಾನ ದಾಖಲಾಗಿದೆ.
ಕರಾವಳಿಯಲ್ಲಿ ಬಿಸಿ ಮತ್ತು ಆರ್ದ್ರ ವಾತಾವರಣ ಮುಂದುವರಿಯುವ ಸಾಧ್ಯತೆ ಇದೆ. ಗರಿಷ್ಠ ತಾಪಮಾನದಲ್ಲಿ ಯಾವುದೇ ದೊಡ್ಡ ಬದಲಾವಣೆಯಿಲ್ಲ. ನಂತರ ಉತ್ತರ ಒಳನಾಡಿನಲ್ಲಿ ೨-೩ ಡಿ.ಸೆ. ಹೆಚ್ಚಾಗುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಿದೆ.