ಇಚ್ಚಾಶಕ್ತಿ ಪ್ರಾಮಾಣಿಕವಾಗಿದ್ದರೆ ಗೋ ಶಾಲೆಗಳು ಕ್ರಿಯಾಶೀಲವಾಗಿ ಈಗಾಗಲೇ ಕಾರ್ಯನಿರ್ವಹಿಸುತ್ತಿದ್ದವು
ಬೆಂಗಳೂರು: ಕಾಂಗ್ರೆಸ್ ಸರ್ಕಾರ ‘ಗೋಮುಖ ವ್ಯಾಘ್ರತನ’ವನ್ನು ಅನಾವರಣ ಮಾಡಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು ಪುಣ್ಯಕೋಟಿಯ ಕಥೆಯನ್ನು ಜಗತ್ತಿಗೆ ಸಾರಿದ ಕರುನಾಡು ನಮ್ಮದು,ಈ ನಿಟ್ಟಿನಲ್ಲಿ ಗೋವು ಸಂರಕ್ಷಿಸುವುದು ಈ ನೆಲದ ಸಂಸ್ಕೃತಿಯನ್ನು ರಕ್ಷಿಸಿಕೊಂಡಂತೆ ಎಂಬ ಮಹತ್ವದ ಸಂಕಲ್ಪವನ್ನು ತೊಟ್ಟು ಜಿಲ್ಲೆಗೊಂದು ಗೋ ಶಾಲೆಯನ್ನು ತೆರೆಯುವ ಯೋಜನೆಗೆ ಚಾಲನೆ ನೀಡಿದ್ದ ಈ ಹಿಂದಿನ ನಮ್ಮ ಕರ್ನಾಟಕ ಬಿಜೆಪಿ ಸರ್ಕಾರದ ನಿರ್ಧಾರವನ್ನು ಕೈ ಬಿಟ್ಟಿರುವ ಕಾಂಗ್ರೆಸ್ ಸರ್ಕಾರದ ನಿಲುವು ಅದರ ‘ಗೋಮುಖ ವ್ಯಾಘ್ರತನ’ವನ್ನು ಅನಾವರಣ ಮಾಡಿದೆ.
ಗೋವುಗಳು ಗೋ ಶಾಲೆಗೆ ಬರುತ್ತಿಲ್ಲ ಎನ್ನುವುದು ನೆಪ ಮಾತ್ರ, ಇಚ್ಚಾಶಕ್ತಿ ಪ್ರಾಮಾಣಿಕವಾಗಿದ್ದರೆ ಗೋ ಶಾಲೆಗಳು ಕ್ರಿಯಾಶೀಲವಾಗಿ ಈಗಾಗಲೇ ಕಾರ್ಯನಿರ್ವಹಿಸುತ್ತಿದ್ದವು, ಆದರೆ ಗೋ ಮಾಂಸ ಭಕ್ಷಕರ ಪರವಾಗಿ ಸದಾ ಚಿಂತಿಸುವ ಕಾಂಗ್ರೆಸ್ ಸರ್ಕಾರದಿಂದ ಗೋ ಶಾಲೆ ಉಳಿಸಿ-ಬೆಳೆಸುವ ಬದ್ಧತೆ ನಿರೀಕ್ಷಿಸಲು ಹೇಗೆ ಸಾಧ್ಯ? ಸರ್ಕಾರದ ಈ ನಿರ್ಧಾರ ಅತ್ಯಂತ ಖಂಡನೀಯ. ಈ ನಿರ್ಧಾರದಿಂದ ಗೋವುಗಳನ್ನು ಪೂಜಿಸುವ ಕೋಟ್ಯಂತರ ಜನರ ಭಾವನೆಯನ್ನು ಕರ್ನಾಟಕ ಕಾಂಗ್ರೆಸ್ ಸರ್ಕಾರ ಘಾಸಿಗೊಳಿಸಿದೆ ಎಂದಿದ್ದಾರೆ.