ಬೆಳಗಾವಿ: ಗ್ಯಾರಂಟಿ ಯೋಜನೆಗಳನ್ನು ಕೊಡುವ ಮೂಲಕ ಜನರ ಬದುಕನ್ನು ಹಸನು ಮಾಡುತ್ತಿದ್ದೇವೆ ಎಂದು ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ ಹೇಳಿದ್ದಾರೆ.
ನಗರದ ಸಿಪಿಎಡ್ ಮೈದಾನದಲ್ಲಿ ‘ಸಂವಿಧಾನ ರಕ್ಷಿಸಿ’ ಹಾಗೂ ‘ಕೇಂದ್ರ ಸರ್ಕಾರದ ಬೆಲೆ ಏರಿಕೆ ಖಂಡಿಸಿ’ ನಡೆದ ಬೃಹತ್ ಪ್ರತಿಭಟನಾ ಸಮಾವೇಶದಲ್ಲಿ ಮಾತನಾಡಿ ರೈತನಿಗೆ ಸಂಬಳ, ಪಿಂಚಣಿ, ನಿವೃತ್ತಿ ಯಾವುದೂ ಇಲ್ಲ. ರೈತರಿಗೆ ಸಹಾಯ ಮಾಡಬೇಕೆಂದು ನಮ್ಮ ಸರ್ಕಾರ 4 ರೂ. ಹಾಲಿನ ದರ ಹೆಚ್ಚಿಸಿದಾಗ, ಇದನ್ನು ಸಹಿಸಲು ಆಗದೇ ಬಿಜೆಪಿಯವರು ಹೋರಾಟ ಮಾಡುತ್ತಿದ್ದಾರೆ. ರೈತ ವಿರೋಧಿ ಬಿಜೆಪಿ ಸ್ನೇಹಿತರು ತಮ್ಮ ಆಕ್ರೋಶವನ್ನು ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರದ ವಿರುದ್ಧ ವ್ಯಕ್ತಪಡಿಸಬೇಕು. ಸಿಮೆಂಟ್, ಕಬ್ಬಿಣ, ಸಕ್ಕರೆ, ಅಕ್ಕಿ, ಅಡುಗೆ ಎಣ್ಣೆ, ಬಂಗಾರದ ಬೆಲೆ ಗಗನಕ್ಕೆ ಹೋಗಿದೆ. ಜನರ ಪರವಾಗಿ ನಾವು ಕೇಂದ್ರದ ವಿರುದ್ಧ ಧ್ವನಿ ಎತ್ತುತ್ತಿದ್ದೇವೆ. ಅಧಿಕಾರ ನಶ್ವರ ,ಕಾಂಗ್ರೆಸ್ ಯೋಜನೆಗಳು ಅಜರಾಮರ, ಮತದಾರನೇ ಈಶ್ವರ. ನಾವು ಗ್ಯಾರಂಟಿ ಯೋಜನೆಗಳನ್ನು ಕೊಡುವ ಮೂಲಕ ಜನರ ಬದುಕನ್ನು ಹಸನು ಮಾಡುತ್ತಿದ್ದೇವೆ.
ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರ ಆದರ್ಶಗಳನ್ನು ಮರೆತು ಬಿಜೆಪಿ ಅನ್ಯಾಯ ಮಾಡುತ್ತಿದೆ. ಇತಿಹಾಸ ಮರೆತವರು ಇತಿಹಾಸ ಸೃಷ್ಟಿ ಮಾಡಲು ಸಾಧ್ಯವಿಲ್ಲ ಎಂಬುದನ್ನು ಮರೆಯಬಾರದು. ಕಾಶ್ಮೀರದಲ್ಲಿ ನಡೆದ ಉಗ್ರರ ದಾಳಿಯನ್ನು ಇಡೀ ದೇಶವೇ ಖಂಡಿಸಿದೆ. ಕಾಂಗ್ರೆಸ್ ಪಕ್ಷವು ದೇಶದ ಶಾಂತಿಗಾಗಿ ಪಕ್ಷಭೇದವನ್ನು ಮರೆತು ಕೇಂದ್ರದ ಜೊತೆಗೆ ನಿಂತಿದೆ. ಪಹಲ್ಗಾಮ್‌ನಲ್ಲಿ ಮೃತಪಟ್ಟವರಿಗೆ 10 ಲಕ್ಷ ರೂ. ಪರಿಹಾರವನ್ನು ನೀಡಿ, ನೋವಿನಲ್ಲಿರುವ ಆ ಕುಟುಂಬದವರ ಪರವಾಗಿ ನಮ್ಮ ಸರ್ಕಾರ ಬೆನ್ನೆಲುಬಾಗಿ ನಿಂತಿದೆ ಎಂದರು.