ದಾವಣಗೆರೆ: ಪೊಲೀಸರನ್ನು ದುರುಪಯೋಗಪಡಿಸಿಕೊಂಡು ದೌರ್ಜನ್ಯ, ದಬ್ಬಾಳಿಕೆ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರದ ಗೂಂಡಾವರ್ತನೆ ವಿರುದ್ಧ ಬಿಜೆಪಿ ನಾಯಕರ ಜತೆ ಚರ್ಚೆ ನಡೆಸಿ ಮುಂದಿನ ಹೆಜ್ಜೆಯ ಬಗ್ಗೆ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಎಚ್ಚರಿಕೆ ನೀಡಿದರು.
ನಗರದ ಹೊರವಲಯದಲ್ಲಿರುವ ಸರ್ಕ್ಯೂಟ್ ಹೌಸ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬೆಳಗಾವಿಯ ಸುವರ್ಣಸೌಧದಲ್ಲಿ ಕಾಂಗ್ರೆಸ್ ಪುಡಾರಿಗಳು ನುಗ್ಗಿ ನಮ್ಮ ಪಕ್ಷದ ಸಿಟಿ ರವಿ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಹಾಗಿದ್ದರೂ ಕಾಂಗ್ರೆಸ್ ಸರ್ಕಾರ ಪೊಲೀಸರನ್ನು ದುರುಪಯೋಗ ಪಡಿಸಿಕೊಂಡು ಸಿಟಿ ರವಿ ಅವರ ಮೇಲೆ ಯಾವುದೇ ನೋಟಿಸ್ ನೀಡದೆ ಎಫ್ಐಆರ್ ದಾಖಲಿಸಿ ಬಂಧಿಸಿ, ಅವರನ್ನು ಅಮಾನವಿಯವಾಗಿ ನಡೆಸಿಕೊಂಡಿರುವುದು ಖಂಡನೀಯ ಎಂದು ಕಿಡಿಕಾರಿದರು.
ಕಾಂಗ್ರೆಸ್ ಸರ್ಕಾರ ತೋರುತ್ತಿರುವ ಗುಂಡಾವರ್ತನೆ ನೋಡಿ ಸುಮ್ಮನಿರಲು ಬಿಜೆಪಿ ಕಾರ್ಯಕರ್ತರೇನು ಬಳೆ ತೊಟ್ಟುಕೊಂಡು ಕೂತಿಲ್ಲ. ಈ ರೀತಿ ದೌರ್ಜನ್ಯ, ದಬ್ಬಾಳಿಕೆಗೆ ತಕ್ಕ ಶಾಸ್ತಿ ಮಾಡುತ್ತೇವೆ. ನಾವು ನಮ್ಮ ಪಕ್ಷದ ನಾಯಕರೊಂದಿಗೆ ಚರ್ಚೆ ನಡೆಸಿ ಮುಂದಿನ ಹೋರಾಟದ ಬಗ್ಗೆ ತೀರ್ಮಾನಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಕಾಂಗ್ರೆಸ್ ಪುಡಾರಿಗಳು ನಡೆಸಿದ ಹಲ್ಲೆ ಸಂಬಂಧ ಕಾನೂನುಬಾಹಿರವಾಗಿ ಸಿಟಿ ರವಿ ಅವರನ್ನೇ ಬಂಧಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ನೀಡಿರುವ ತೀರ್ಪನ್ನು ಬಿಜೆಪಿ ಸ್ವಾಗತಿಸುತ್ತದೆ ಎಂದರು.
ವಿಪಕ್ಷ ನಾಯಕ ಆರ್. ಅಶೋಕ್, ಸಿ.ಟಿ. ರವಿ, ಶಾಸಕ ಬಿ.ಪಿ. ಹರೀಶ್ ಇತರರು ಇದ್ದರು.