ಹುಬ್ಬಳ್ಳಿ: ಇಂಡಿ ಮೈತ್ರಿಕೂಟದಿಂದ ಕಾಂಗ್ರೆಸ್ ಹೊರ ಬಂದಿಲ್ಲ. ಇಂಡಿ ಮೈತ್ರಿಕೂಟವೇ ಕಾಂಗ್ರೆಸ್ ಪಕ್ಷವನ್ನು ಹೊರ ಹಾಕಿವೆ ಎಂದು ಕೇಂದ್ರ ಆಹಾರ ಮತ್ತು ನವೀಕರಿಸಬಹುದಾದ ಇಂಧನ ಖಾತೆ ಸಚಿವ ಪ್ರಲ್ಹಾದ ಜೋಶಿ ವ್ಯಂಗ್ಯವಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಳಿದ ಇಂಡಿಗಳು ಕೂಡಿಕೊಂಡು ಕಾಂಗ್ರೆಸ್ ಕೈಗೆ ಗಿಂಡಿ ಕೊಟ್ಟು ಕಳಿಸಿವೆ. ಕಾಂಗ್ರೆಸ್ ಪಕ್ಷ ಎಲ್ಲರಿಗೂ ಬೇಡವಾಗಿದೆ ಎಂಬುದು ಇದರಿಂದಲೇ ಸ್ಪಷ್ಟವಾಗಿದೆ. ಇಡೀ ದೇಶದಲ್ಲೇ ಕಾಂಗ್ರೆಸ್ ಅಸ್ತಿತ್ವ ಕಳೆದುಕೊಳ್ಳುತ್ತಿದೆ. ಹಿಮಾಚಲ ಪ್ರದೇಶ, ತೆಲಂಗಾಣ, ಕರ್ನಾಟಕದಲ್ಲಿ ಒಳ ಜಗಳ ಶುರುವಾಗಿದೆ. ಇರುವುದೇ ಮೂರು ರಾಜ್ಯದಲ್ಲಿ ಅಧಿಕಾರದಲ್ಲಿದೆ. ಅದರಲ್ಲಿಯೂ ಕಾಂಗ್ರೆಸ್ ಕಿತ್ತು ಹೋಗುತ್ತದೆ. ಕಾಂಗ್ರೆಸ್ ಪಕ್ಷ ಎಲ್ಲರಿಗೂ ಭಾರ ಆಗಿದೆ ಎಂದು ಲೇವಡಿ ಮಾಡಿದರು.