ಮಂಗಳೂರು: ರಾಜ್ಯ ಸರ್ಕಾರ ಜಾರಿಗೊಳಿಸಿದ ಪಂಚ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳು ಕೂಡ ಗ್ರಾಮ ಪಂಚಾಯಿತಿ ಸದಸ್ಯ ಮತದಾರರೇ ಆಗಿದ್ದಾರೆ. ಈ ಹಿನ್ನೆಲೆಯಲ್ಲಿ ಅವಿಭಜಿತ ದ.ಕ. ಜಿಲ್ಲೆಯಲ್ಲಿ ಅಕ್ಟೋಬರ್ ೨೧ರಂದು ನಡೆಯುವ ಸ್ಥಳೀಯಾಡಳಿತಗಳಿಂದ ಆಯ್ಕೆಯಾಗುವ ಪರಿಷತ್ ಉಪ ಚುನಾವಣೆಯಲ್ಲಿ ಮತದಾರರು ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸುವ ವಿಶ್ವಾಸ ಇದೆ ಎಂದು ಕೆಪಿಸಿಸಿ ಉಪಾಧ್ಯಕ್ಷ ಹಾಗೂ ದ.ಕ. ಜಿಲ್ಲಾ ಕಾಂಗ್ರೆಸ್ ಉಸ್ತುವಾರಿ ಆಗಿರುವ ಎಂ.ಸಿ.ವೇಣುಗೋಪಾಲ್ ಹೇಳಿದ್ದಾರೆ.
ಮಂಗಳೂರಿನ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಸದರಾಗಿ ಆಯ್ಕೆಯಾದ ಕೋಟ ಶ್ರೀನಿವಾಸ ಪೂಜಾರಿ ಅವರಿಂದ ತೆರವಾದ ಪರಿಷತ್ ಸ್ಥಾನಕ್ಕೆ ಈ ಉಪ ಚುನಾವಣೆ ನಡೆಯುತ್ತಿದೆ. ಪಂಚಾಯ್ತಿರಾಜ್‌ನಲ್ಲಿ ಕೆಲಸ ಮಾಡಿರುವ ಅನುಭವಿ ಅಭ್ಯರ್ಥಿ ರಾಜು ಪೂಜಾರಿ ಅವರನ್ನು ಕಣಕ್ಕೆ ಇಳಿಸಲಾಗಿದೆ. ಆದರೆ ಬಿಜೆಪಿ ಅಭ್ಯರ್ಥಿಗೆ ಅಂತಹ ಯಾವುದೇ ಅನುಭವ ಇಲ್ಲ. ಅವರು ಸದಸ್ಯರಾಗಿ ಆಯ್ಕೆಯಾದರೆ, ಹೊಸದಾಗಿ ಕಲಿಯಬೇಕಾಗುತ್ತದೆ ಎಂದರು.
ಅವಿಭಜಿತ ಜಿಲ್ಲೆಯಲ್ಲಿ ಒಟ್ಟು ೬,೦೩೨ ಮಂದಿ ಪಂಚಾಯ್ತಿ ಮತದಾರರಿದ್ದಾರೆ. ಇವರಲ್ಲಿ ಶೇ.೫೦ಕ್ಕಿಂತ ಜಾಸ್ತಿ ಮಹಿಳಾ ಮತದಾರರು. ಅಂದರೆ ೩,೫೫೨ ಮಹಿಳೆಯರು ಹಾಗೂ ೨,೪೮೦ ಮಂದಿ ಪುರುಷ ಮತದಾರರಿದ್ದಾರೆ. ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ಬಹುತೇಕ ಮನೆಗಳಿಗೆ ತಲುಪಿದ್ದು, ಮಹಿಳಾ ಮತದಾರರು ಕೂಡ ಇದರ ಫಲಾನುಭವಿ ಆಗಿದ್ದಾರೆ. ಹೀಗಾಗಿ ಈ ಉಪ ಚುನಾವಣೆಯಲ್ಲಿ ಈ ಫಲಾನುಭವಿಗಳು ಕಾಂಗ್ರೆಸ್ ಕೈಹಿಡಿಯುವ ವಿಶ್ವಾಸ ಇದೆ. ಹಿಂದೆ ಕಾಂಗ್ರೆಸ್ ಗೆದ್ದಿರುವ ಇತಿಹಾಸ ಈ ಬಾರಿ ಮರುಕಳಿಸುತ್ತದೆ ಎಂದರು.
೨ ದಿನ ಕ್ಷೇತ್ರಗಳ ಭೇಟಿ:
ಕಾಂಗ್ರೆಸ್ ಅಭ್ಯರ್ಥಿ ರಾಜು ಪೂಜಾರಿ ಅವರು ಅಕ್ಟೋಬರ್ ೧೦ ಮತ್ತು ೧೧ರಂದು ದ.ಕ. ಜಿಲ್ಲೆಯ ಎಲ್ಲ ಅಸೆಂಬ್ಲಿ ಕ್ಷೇತ್ರಗಳಿಗೆ ಭೇಟಿ ನೀಡಲಿದ್ದಾರೆ. ಅ. ೧೦ರಂದು ಉಳ್ಳಾಲ, ಮಂಗಳೂರು ದಕ್ಷಿಣ ಹಾಗೂ ಉತ್ತರ ಕ್ಷೇತ್ರ. ಮರುದಿನ ಬಾಕಿ ಉಳಿದ ಕ್ಷೇತ್ರಗಳಿಗೆ ಭೇಟಿ ನೀಡಿ ಪಂಚಾಯ್ತಿ ಮತದಾರರನ್ನು ಭೇಟಿ ಮಾಡಿ ಮತ ಯಾಚಿಸಲಿ ದ್ದಾರೆ. ಪರಿಷತ್ ಉಪ ಚುನಾವಣೆ ಗೆಲುವಿಗಾಗಿ ಎರಡು ದಿನಗಳ ಕಾಲ ಸರಣಿ ಸಭೆಗಳನ್ನು ನಡೆಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಕೂಡ ಅ. ೧೧ರಂದು ಮಂಗಳೂರಿಗೆ ಭೇಟಿ ನೀಡಲಿದ್ದಾರೆ ಎಂದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಜಿ.ಎ. ಬಾವಾ, ಮಮತಾ ಗಟ್ಟಿ, ಆರ್. ಪದ್ಮರಾಜ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಮುಖಂಡರಾದ ಶುಭೋದಯ ಆಳ್ವ, ಜಿತೇಂದ್ರ ಸುವರ್ಣ, ಶಾಲೆಟ್ ಪಿಂಟೋ, ನಝೀರ್ ಬಜಾಲ್ ಇದ್ದರು.