ಕಾಂಗ್ರೆಸ್ಸಿಗರು ರಾಹುಲ್‌ಗಾಂಧಿ ಅಸಮರ್ಥತೆ ಬಗ್ಗೆ ಮಾತಾಡಲಿ

0
18

ದಾವಣಗೆರೆ: ಚುನಾವಣೆಯಲ್ಲಿ ಸೋತ ನಂತರ ಇವಿಎಂ ಯಂತ್ರಗಳು ಹಾಗೂ ಚುನಾವಣಾ ಆಯೋಗದ ಮೇಲೆ ಕಾಂಗ್ರೆಸ್ಸಿನವರು ಆರೋಪ ಮಾಡುತ್ತಾರೆ. ರಾಹುಲ್ ಗಾಂಧಿ ಅಸಮರ್ಥರಾಗಿರುವ ಬಗ್ಗೆ ಅದೇ ಕಾಂಗ್ರೆಸ್ಸಿನವರು ಮಾತನಾಡುವುದಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಷಿ ಕುಟುಕಿದ್ದಾರೆ.

ಹರಿಹರ ತಾ. ರಾಜನಹಳ್ಳಿ ಶ್ರೀ ಮಹರ್ಷಿ ವಾಲ್ಮೀಕಿ ಪೀಠದಲ್ಲಿ ಭಾನುವಾರ ಶ್ರೀ ವಾಲ್ಮೀಕಿ ಜಾತ್ರೆಗೆ ಆಗಮಿಸಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಮತ್ತೆ ಶೂನ್ಯ ಗಳಿಸಿರುವ ಕಾಂಗ್ರೆಸ್ಸಿಗರು ತಮ್ಮ ಸೋಲಿನ ಬಗ್ಗೆ ಪರಾಮಾರ್ಶೆ ಮಾಡಿಕೊಳ್ಳದೇ ಇವಿಎಂ ಮೇಲೆ ಆರೋಪ ಮಾಡುತ್ತಾರೆ ಎಂದು ವ್ಯಂಗ್ಯವಾಡಿದರು.

ಆಮ್ ಆದ್ಮಿ ಪಕ್ಷ ಸುಳ್ಳು ಹೇಳಿಯೇ ಅಧಿಕಾರಕ್ಕೆ ಬಂದಿತ್ತು. ಈಗ ಅಧಿಕಾರದಿಂದಲೂ ಹೋಯಿತು. ಕರ್ನಾಟಕ, ತೆಲಂಗಾಣ ಬಿಟ್ಟರೆ ಬೇರೆಲ್ಲೂ ಕಾಂಗ್ರೆಸ್ ನವರು ಸ್ವಂತ ಬಲದಲ್ಲಿ ಅಧಿಕಾರ ನಡೆಸುತ್ತಿಲ್ಲ. ಕಾಂಗ್ರೆಸ್ ಮಹಾರಾಷ್ಟ್ರದಲ್ಲಿ 1 ಕೋಟಿ ಮತದಾರರ ಸಂಖ್ಯೆ ಹೆಚ್ಚಿಸಿದ್ದಾಗಿ ಹೇಳಿಕೆ ನೀಡಿದ್ದಾರೆ. ಆದರೆ, ಅಲ್ಲಿ ಚುನಾವಣಾ ಆಯೋಗವು ಪಾರದರ್ಶಕವಾಗಿಯೇ ಕೆಲಸ ಮಾಡಿದೆ ಎಂದು ಅವರು ತಿಳಿಸಿದರು.

ದೇಶದ ಚುನಾವಣಾ ಆಯೋಗವನ್ನು ಹಾಗೂ ಸಾಂವಿಧಾನಿಕ ವ್ಯವಸ್ಥೆಯನ್ನೇ ಅಪಹಾಸ್ಯ ಮಾಡುವ ಕೆಲಸವನ್ನು ಕಾಂಗ್ರೆಸ್ ಪಕ್ಷ ಮಾಡುತ್ತಿದೆ. ಅದನ್ನು ನಾನು ಖಂಡಿಸುತ್ತೇನೆ ಎಂದರು.

Previous articleಮಾಸ್ಟರ್ ಪ್ಲ್ಯಾನ್ ಮಾಡಿ ಆರೋಪಿಯನ್ನು ಕೆಳಗಿಳಿಸಿದ ಪೊಲೀಸರು
Next articleಮೆಟ್ರೋ ರೈಲು ಪ್ರಯಾಣ ದರ ಏರಿಕೆ: ಎಚ್‌ಡಿಕೆ ಆಕ್ರೋಶ