ದಾವಣಗೆರೆ: ಹಿಂದೂ ಸಮಾಜಕ್ಕೆ ಜೀವನವನ್ನೇ ಮುಡಿಪಾಗಿಟ್ಟಿರುವ ಕಲ್ಲಡ್ಕ ಪ್ರಭಾಕರ್ ಸೇರಿ 15 ಜನರ ಮೇಲೆ ಹಾಕಿರುವ ಎಫ್‌ಐಆರ್ ಹಾಗೂ ಬಿಜೆಪಿ ಮುಖಂಡ ಅರುಣಕುಮಾರ್ ಪುತ್ತಿಲರನ್ನು ಗಡಿಪಾರು ಮಾಡುವ ಆದೇಶ ಹಿಂಪಡೆಯದಿದ್ದರೆ ಕಾಂಗ್ರೆಸ್ ಸರ್ಕಾರದ ವಿರುದ್ಧ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಎಚ್ಚರಿಕೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದ ಕಾಂಗ್ರೆಸ್ ಸರ್ಕಾರ ದ್ವೇಷರಾಜಕಾರಣ ಮಾಡುತ್ತಿದ್ದು, ಸುಹಾಸ್ ಶೆಟ್ಟಿ ಶ್ರದ್ಧಾಂಜಲಿಯಲ್ಲಿ ಕಲ್ಲಡ್ಕ ಪ್ರಭಾಕರ್ ಭಟ್ ಪ್ರಚೋದನಾತ್ಮಕ ಭಾಷಣ ಮಾಡಿದ್ದಾರೆ ಎಂದು ಆರೋಪಿಸಿ ಅವರ ವಿರುದ್ಧ ಎಫ್‌ಐಆರ್ ದಾಖಲಿಸಿದೆ. ಅಬ್ಧುಲ್ ರಹೀಂ ಸಾವಿನ ತರುವಾಯ ಅಲ್ಲಿ ಪಾಲ್ಗೊಂಡ ಕೆಲವರು ಸರ್ಕಾರಕ್ಕೆ ಎಚ್ಚರಿಕೆ ನೀಡಿ ಹೇಳಿಕೆ ನೀಡಿದ್ದರು ಅವರ ವಿರುದ್ಧ ಯಾಕೆ ಪ್ರಕರಣ ದಾಖಲಿಸಲಿಲ್ಲ?, ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಎನ್ನುವ ಘೋಷಣೆ ಕೂಗಿ ರಾಷ್ಟçವಿರೋಧಿ ನಡೆ ಅನುಸರಿಸಿದ ಎಷ್ಟು ಮಂದಿಯ ಮೇಲೆ ಈ ಸರ್ಕಾರ ಪ್ರಕರಣ ದಾಖಲಿಸಿದೆ ಎಂದು ಪ್ರಶ್ನಿಸಿದ ಅವರು, ಕಾಂಗ್ರೆಸ್ ಸರ್ಕಾರ ಮತಬ್ಯಾಂಕ್‌ಗಾಗಿ ಓಲೈಕೆ ರಾಜಕಾರಣ ಮಾಡುತ್ತಾ ಹಿಂದೂಗಳನ್ನೇ ಟಾರ್ಗೆಟ್ ಮಾಡುತ್ತಿದೆ ಎಂದು ಆಪಾದಿಸಿದರು.
ಕಲ್ಲಡ್ಕ ಪ್ರಭಾಕರ ಭಟ್ಟರು ಹಿಂದೂಗಳ ರಕ್ಷಣೆಗಾಗಿ ತಮ್ಮ ಜೀವಮಾನವನ್ನೇ ಮುಡುಪಾಗಿಟ್ಟಿದ್ದಾರೆ ಅಂತವರ ವಿರುದ್ಧ ಎಫ್‌ಐಆರ್ ದಾಖಲಿಸಿರುವುದು ಮತ್ತು ಬಿಜೆಪಿ ಮುಖಂಡ ಅರುಣ ಪುತ್ತಿಲ ಅವರನ್ನು ದಕ್ಷಿಣ ಕನ್ನಡ ಜಿಲ್ಲೆಯಿಂದ ಗಡಿಪಾರು ಮಾಡಬೇಕೆನ್ನುವ ಆದೇಶ ಹೊರಡಿಸಿರುವುದು ಕಂಡರೆ ಈ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ. ಕೋಮು ಸೌಹಾರ್ದ ಸಮಿತಿಯನ್ನು ರಚಿಸಿ ಹಿಂದೂಗಳನ್ನು ಟಾರ್ಗೆಟ್ ಮಾಡುತ್ತಿದೆ ಎನ್ನುವುದು ಮೇಲ್ನೋಟಕ್ಕೆ ತಿಳಿಯುತ್ತದೆ ಎಂದು ಹರಿಹಾಯ್ದರು.
ಇದೊಂದು ಆಲಿಬಾಬ, ಚಾಲೀಸ್ ಚೋರ್ ಸರ್ಕಾರ ಅಂದ್ರೆ ಹಗರಣಗಳ ಸರ್ಕಾರವಾಗಿದ್ದು, ಪ್ರತಿಯೊಂದರಲ್ಲಿಯೂ ಭ್ರಷ್ಟಾಚಾರ ನಡೆಸುತ್ತಿದೆ. ಈಗ ವಸತಿ ಇಲಾಖೆಯಲ್ಲೂ ಭ್ರಷ್ಟಾಚಾರ ನಡೆದಿರುವ ಆರೋಪ ಕೇಳಿಬಂದಿದೆ. ಈ ಸರ್ಕಾರದಿಂದ ಅಭಿವೃದ್ಧಿಯ ಮಾತೇ ಇಲ್ಲ ಎಂದರು.