ನವದೆಹಲಿ: ಗಲಾಟೆ, ಗಲಭೆಗಳ ಮೂಲಕ ಕಾಂಗ್ರೆಸ್ ಸರ್ಕಾರ ಕರ್ನಾಟಕವನ್ನು ಅಕ್ಷರಶಃ ಪಾಕಿಸ್ತಾನ ಮಾಡಲು ಹೊರಟಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಂಡ್ಯದ ನಾಗಮಂಗಲ ಘಟನೆಯ ಕುರಿತು ಪ್ರತಿಕ್ರಿಯಿಸಿರುವ ಅವರು, ಸರ್ವ ಜನಾಂಗದ ಶಾಂತಿಯ ತೋಟದಂತಿರುವ ಕರ್ನಾಟಕವನ್ನು ಕಾಂಗ್ರೆಸ್ ಸರ್ಕಾರ ರಾಜಕೀಯ ತುಷ್ಟೀಕರಣಕ್ಕಾಗಿ ಮತ್ತೊಂದು ಪಾಕಿಸ್ತಾನ ಮಾಡಲು ಹೊರಟಿದೆ. ಓಲೈಕೆ ಮನಸ್ಥಿತಿಯಿಂದ ಕರ್ನಾಟಕದ ಪರಿಸ್ಥಿತಿ ಇಲ್ಲಿಗೆ ಬಂದು ನಿಂತಿದೆ. ನಾಗಮಂಗಲ ಗಲಭೆ ಸೇರಿದಂತೆ ಇತ್ತೀಚಿನ ಘಟನೆಗಳ ಬಗ್ಗೆ ತೀವ್ರ ಕಳವಳ ವ್ಯಕ್ತವಾಗುತ್ತಿದೆ ಎಂದರು.
ಮಸೀದಿ ಮುಂದೆ ಗಣಪತಿಯ ಮೆರವಣಿಗೆ ಹೋಗಬಾರದು ಎಂಬ ಕಾನೂನು, ನಿಯಮ ಎಲ್ಲಿದೆ? ಗಣೇಶ ಮೂರ್ತಿಯ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿ ಬೆಂಕಿ ಹಚ್ಚಿದ್ದಾರೆ. ಇದೆಂತಹ ನಾಗರೀಕತೆ. ಹಿಂದೂ ಹಬ್ಬಗಳು ಎಂದರೆ ಕಾಂಗ್ರೆಸ್ ಪಕ್ಷಕ್ಕೆ ಯಾಕಿಷ್ಟು ತಾತ್ಸಾರ? ಸರ್ಕಾರಕ್ಕೆ ನಿಜವಾಗಲೂ ಜನರ ಬಗ್ಗೆ ಕಳಕಳಿ-ಕಾಳಜಿ ಇದ್ದರೆ ವೋಟ್ ಬ್ಯಾಂಕ್ ನೀತಿ ಅನುಸರಿಸುವುದನ್ನು ಬಿಟ್ಟು ಮತಾಂಧ ಶಕ್ತಿಯನ್ನು ಹತ್ತಿಕ್ಕಬೇಕು ಎಂದು ಆಗ್ರಹಿಸಿದ್ದಾರೆ.

























