ಹುಬ್ಬಳ್ಳಿ: ಕರ್ನಾಟಕ ರಾಜ್ಯದ ಪೊಲೀಸ್ ಇಲಾಖೆ ಅತ್ಯುತಮ ಕಾರ್ಯನಿರ್ವಹಣೆಯಿಂದ ಇಡೀ ರಾಷ್ಟ್ರದಲ್ಲಿ ಮನ್ನಣೆ ಗಳಿಸಿದೆ. ಕರ್ನಾಟಕದ ಪೊಲೀಸ್ ಇಲಾಖೆಯು ರಾಷ್ಟ್ರಕ್ಕೆ ಮಾದರಿಯಾಗಿದೆ ಎಂದು ನಿವೃತ್ತ ಪೊಲೀಸ್ ಸಬ್ ಇನ್ಸಪೆಕ್ಟರ್ ಎಸ್.ಎಸ್.ಜಕ್ಕನಗೌಡ್ರ ಹೇಳಿದರು.
ಇಂದು ಕಾರವಾರ ರಸ್ತೆಯ ಹಳೆಯ ಸಶಸ್ತ್ರ ಮೀಸಲು ಪಡೆಯ ಕವಾಯತು ಮೈದಾನದಲ್ಲಿ ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತಾಲಯದಿಂದ ಆಯೋಜಿಸಿದ್ದ ಪೊಲೀಸ್ ಧ್ವಜ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿ ಹಿರಿಯ ಕಿರಿಯ ಅಧಿಕಾರಿಗಳನ್ನು ಒಗ್ಗೂಡಿಸಿ, ಅವರಿಗೆ ಧೈರ್ಯ ತುಂಬುವ ಕಾರ್ಯಕ್ರಮ ಇದಾಗಿದೆ. 1965 ಪೊಲೀಸ್ ಕಾಯ್ದೆ ಜಾರಿಗೆ ಬಂದ ಹಿನ್ನೆಲೆಯಲ್ಲಿ ಪ್ರತಿವರ್ಷ ಏಪ್ರೀಲ್ 2 ರಂದು ಪೊಲೀಸ್ ಧ್ವಜ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಈ ದಿನವನ್ನು ನಿವೃತ್ತರ ಕಲ್ಯಾಣ ದಿನ ಎಂದು ಕರೆಯಬಹುದಾಗಿದೆ. ಯಾವುದೇ ಭೇದಭಾವ ಮಾಡದೇ ಎಲ್ಲರನ್ನೂ ಸಮಾನರಂತೆ ಕಾಣಲಾಗುತ್ತದೆ. ಸುಮಾರು 41 ವರ್ಷಗಳ ಕಾಲ ಸುದೀರ್ಘ ಸೇವೆ ಸಲ್ಲಿಸಿದ ಸಂತೃಪ್ತಿ ನನಗಿದೆ ಎಂದರು.
ಉದ್ಯಮಿ ವಿ.ಎಸ್.ವಿ.ಪ್ರಸಾದ ಮಾತನಾಡಿ, ಅರ್ಥಪೂರ್ಣ ಕಾರ್ಯಕ್ರಮದಲ್ಲಿ ಭಾಗವಹಿಸುವುದು ನಿಜಕ್ಕೂ ಸಂತಸ ತಂದಿದೆ. ಸಾರ್ವಜನಿಕರು ಸಹ ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಪೊಲೀಸ್ ಇಲಾಖೆ ಎಂದರೆ ಮೊದಲು ಭಯವಿತ್ತು. ಇಂದು ಸಾರ್ವಜನಿಕರಲ್ಲಿ ಭಯದ ವಾತಾವರಣ ಮುಕ್ತವಾಗಿದೆ. ಪೊಲೀಸರು ಶಾಂತಿ, ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಬೇಕು ಎಂದರು.
ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತರಾದ ಎನ್ ಶಶಿಕುಮಾರ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, ಕಳೆದ ಸಾಲಿನಲ್ಲಿ ಪೊಲೀಸ್ ಪ್ರಧಾನ ಕಚೇರಿಯಿಂದ 33.50 ಲಕ್ಷ ಮೌಲ್ಯದ ಧ್ವಜಗಳಿಂದ ಸುಮಾರು ರೂ.33.80 ಲಕ್ಷ ಮೊತ್ತವನ್ನು ಸಂಗ್ರಹಿಸಲಾಗಿತ್ತು. ಅದರಲ್ಲಿ ಶೇ.50 ರಷ್ಟು ಹಣವನ್ನು ನಿವೃತ್ತ ಪೊಲೀಸ್ ಅಧಿಕಾರಿಗಳ ಕಲ್ಯಾಣ ನಿಧಿ ಹಾಗೂ ಉಳಿದ ಶೇ.50 ರಷ್ಟು ಮೊತ್ತವನ್ನು ಕೇಂದ್ರ ನಿವೃತ್ತ ಪೊಲೀಸ್ ಅಧಿಕಾರಿಗಳ ಕಲ್ಯಾಣ ನಿಧಿಗೆ ಜಮೆ ಮಾಡಲಾಗಿದೆ. ಈ ಸಾಲಿನಲ್ಲಿ 37.55 ಲಕ್ಷ ಮೌಲ್ಯದ ಪೊಲೀಸ್ ಧ್ವಜಗಳನ್ನು ಹಂಚಿಕೆ ಮಾಡಲಾಗಿದೆ. ಕಳೆದ ಸಾಲಿನಲ್ಲಿ ನಿವೃತ್ತ ಪೊಲೀಸ್ ಅಧಿಕಾರಿಗಳ ಕಲ್ಯಾಣ ನಿಧಿಯಿಂದ ನಿವೃತ್ತ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ವೈದ್ಯಕೀಯ ವೆಚ್ಚಕ್ಕೆ ರೂ.5.38 ಲಕ್ಷ ಹಾಗೂ ರೂ.80 ಸಾವಿರ ಹಣವನ್ನು ನಿಧನ ಹೊಂದಿದ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಅಂತ್ಯ ಸಂಸ್ಕಾರಕ್ಕೆ ಬಳಸಲಾಗಿದೆ. 837 ಜನರಿಗೆ ವೈದ್ಯಕೀಯ ಸೌಲಭ್ಯ ಪಡೆದುಕೊಂಡಿದ್ದಾರೆ. ಅಲ್ಲದೇ ಪೊಲೀಸ್ ಅಧಿಕಾರಿ, ಸಿಬ್ಬಂದಿಗಳ ಮಕ್ಕಳ ಎಸ್.ಎಸ್.ಎಲ್.ಸಿ ಹಾಗೂ ನಂತರದ ವಿದ್ಯಾಭ್ಯಾಸಕ್ಕಾಗಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ರೂ.12,84,629 ಶೈಕ್ಷಣಿಕ ಪ್ರೋತ್ಸಾಹ ಧನವನ್ನು ನೀಡಲಾಗಿದೆ. ಪೊಲೀಸ್ ಇಲಾಖೆ ಶಿಸ್ತಿನ ಇಲಾಖೆಯಾಗಿದೆ ಎಂದರು.
ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವಿಶೇಷ ಭೂಸ್ವಾಧೀನಾಧಿಕಾರಿಗಳಾದ ದೇವರಾಜ, ಮಾರುತಿ ಬ್ಯಾಕೋಡ ಮಾತನಾಡಿದರು.
ನಾಗರಾಜ ಪಾಟೀಲ ನೇತೃತ್ವದಲ್ಲಿ ಉತ್ತರ ವಿಭಾಗ, ದಕ‌್ಷಿಣ ವಿಭಾಗ, ಧಾರವಾಡ ವಿಭಾಗ, ಮಹಿಳಾ ವಿಭಾಗ, ಸಂಚಾರಿ ವಿಭಾಗ ಮತ್ತು ಸಿ.ಎ.ಆರ್. ವಿಭಾಗ ತಂಡಗಳು ಆಕರ್ಷಕ ಪಥ ಸಂಚಲನ ನಡೆಸಿದವು. ಕಾರ್ಯಕ್ರಮದಲ್ಲಿ ಮಾಜಿ ಸಂಸದರಾದ ಐ.ಜಿ.ಸನದಿ, ಡಿಸಿಪಿ ವೈ.ಕೆ.ಕಾಶಪ್ಪನವರ, ನಿವೃತ್ತ ಪೊಲೀಸ್ ಅಧಿಕಾರಿಗಳಾದ ರವಿ ನಾಯಕ, ಎ.ಎನ್.ಜೋಗಳೇಕರ್, ಆರ್.ಜಿ.ಅಂಗಡಿ, ಶಿವಶಂಕರ ಗಡಾದ, ಪ್ರಭುದೇವ, ಎ.ಬಿ.ಬಸರಗಿ, ಎಸ್.ಸಿ.ಯಾದವ, ಡಿ.ಡಿ.ಮಾಳಗಿ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಮುಖಂಡರು, ಪೊಲೀಸ್ ಅಧಿಕಾರಿಗಳ ಕುಟುಂಬಸ್ಥರು, ಸಾರ್ವಜನಿಕರು ಇತರರು ಭಾಗವಹಿಸಿದ್ದರು. ಪೊಲೀಸ್ ಇನ್ಸಪೆಕ್ಟರ್ ಮಾರುತಿ ಗುಳ್ಳಾರಿ ನಿರೂಪಿಸಿದರು. ಡಿಸಿಪಿ ಮಹಾನಿಂಗ ನಂದಗಾವಿ ವಂದಿಸಿದರು.