ಕರ್ನಾಟಕದಲ್ಲಿ ನಾನು ನಂ.೧ ಆಗುವೆ

ಬೆಳಗಾವಿ: ನಾನೇನು ನಿಸ್ವಾರ್ಥ ತ್ಯಾಗಿ, ಸನ್ಯಾಸಿ ಅಲ್ಲ. ನಾನೂ ಕೂಡ ಮುಂದೇನಾದರೂ ಆಗಬೇಕು ಎನ್ನುವ ಉದ್ದೇಶದಿಂದ ಹೋರಾಟ ಮಾಡುತ್ತಿದ್ದೇನೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ಬೆಳಗಾವಿಯಲ್ಲಿಂದು ವಕ್ಫ್ ವಿರುದ್ಧ ನಡೆದ ಜನಜಾಗೃತಿ ಸಭೆಯ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ಕರ್ನಾಟಕದಲ್ಲಿ ನಾನು ನಂ. ೧ ಆಗುತ್ತೇನೆ. ನಾನು ಮುಖ್ಯಮಂತ್ರಿ ಆದ ಬಳಿಕ ಮಾಧ್ಯಮಗಳೇ ನನ್ನ ಬಳಿ ಓಡೋಡಿ ಬರುತ್ತವೆ ಎಂದರು.
ವಕ್ಫ್ ವಿರುದ್ಧ ಜನ ಜಾಗೃತಿ ಮಾಡುತ್ತಿದ್ದೇವೆ. ಕಲ್ಯಾಣ ಕರ್ನಾಟಕ ಮುಗಿಸಿ ಕಿತ್ತೂರು ಕರ್ನಾಟಕ ಪ್ರವೇಶಿಸಿದ್ದೇವೆ. ನಾಳೆ ಸಂಜೆ ನಾವೆಲ್ಲ ದೆಹಲಿಗೆ ಹೋಗುತ್ತಿದ್ದೇವೆ. ಇಲ್ಲಿಯವರೆಗೂ ಮಠ, ಮಂದಿರ ವಕ್ಫ್ ಆಸ್ತಿ ಅಂತ ಆಗಿವೆ. ಅದರ ಬಗ್ಗೆ ವರದಿ ಕೊಡುತ್ತೇವೆ. ಜಂಟಿ ಸದನ ಸಮಿತಿ ಸದಸ್ಯರನ್ನು ಭೇಟಿಯಾಗಿ ಮನವಿ ಮಾಡುತ್ತೇವೆ. ಅಷ್ಟಕ್ಕೆ ಮಾತ್ರ ನಮ್ಮ ಪ್ರವಾಸವಿದೆ ಎಂದು ತಿಳಿಸಿದರು.
ನಮ್ಮ ಸಮುದಾಯದ ಮೀಸಲಾತಿ ಹೋರಾಟಕ್ಕೆ ಸರ್ಕಾರದಿಂದ ಬೆದರಿಕೆ ಹಾಕುವ ಕೆಲಸ ಆಗುತ್ತಿದೆ. ನಮ್ಮ ಹೋರಾಟಕ್ಕೆ ಏನಾದರೂ ತೊಂದರೆ, ಅನಾಹುತ ಆದರೆ ಅದಕ್ಕೆ ಸಿದ್ದರಾಮಯ್ಯ ಸರ್ಕಾರವೇ ಹೊಣೆಯಾಗುತ್ತದೆ ಎಂದು ಯತ್ನಾಳ ಎಚ್ಚರಿಕೆ ನೀಡಿದರು.