ಮಾಯಕೊಂಡ ಕ್ಷೇತ್ರದ ವ್ಯಾಪ್ತಿಯ ನವಿಲೇಹಾಳ್ ಗ್ರಾಪಂ ಕಚೇರಿಗೆ ದಿಢೀರ್ ಭೇಟಿ: ಇ-ಸ್ವತ್ತು ಮಾಡಿಕೊಳ್ಳಲು ವಿಳಂಬ ಆರೋಪ
ದಾವಣಗೆರೆ: ಇ-ಸ್ವತ್ತು ವಿಳಂಬ ಮಾಡಲಾಗುತ್ತಿದೆ ಎಂಬ ಆರೋಪ ಹಿನ್ನೆಲೆಯಲ್ಲಿ ನವಿಲೇಹಾಳ್ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿದಾಗ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಕರ್ತವ್ಯ ಲೋಪ ಕಂಡು ಶಾಸಕ ಕೆ.ಎಸ್.ಬಸವಂತಪ್ಪ ಗರಂ ಆದರು.
ಮಾಯಕೊಂಡ ಕ್ಷೇತ್ರದ ವ್ಯಾಪ್ತಿಯ ನವಿಲೇಹಾಳ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳ ಜನರಿಗೆ ಇ-ಸ್ವತ್ತು ಮಾಡಿಕೊಂಡಲು ವಿಳಂಬ ಮತ್ತು ಕಚೇರಿಗೆ ಅಲೆದಾಡಿಸುವ ಬಗ್ಗೆ ಗ್ರಾಮಸ್ಥರು ಶಾಸಕರಿಗೆ ದೂರು ಸಲ್ಲಿಸಿದ್ದರು.
ಈ ಹಿನ್ನೆಲೆಯಲ್ಲಿ ಸೋಮವಾರ ಗ್ರಾಮ ಪಂಚಾಯಿತಿ ಕಚೇರಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಕರ್ತವ್ಯ ಲೋಪ ಕಂಡು ಬಂದಿತು. ಬೆಳಗ್ಗೆ ಪಿಡಿಒ ಕರ್ತವ್ಯಕ್ಕೆ ಬಂದಿದ್ದರೂ ಸರ್ಕಾರದ ಹಾಜರಿ ಪುಸ್ತಕದಲ್ಲಿ ಸಹಿ ಮಾಡಿರಲಿಲ್ಲ. ಇವರಲ್ಲದೇ, ಕೆಲವು ಅಧಿಕಾರಿ, ಸಿಬ್ಬಂದಿಗಳು ಸಹಿ ಮಾಡಿರಲಿಲ್ಲ. ಅಲ್ಲದೇ ಕಳೆದ ಮೂರು ದಿನಗಳಿಂದ ಕೆಲವರು ಸಹಿ ಮಾಡಿಲ್ಲದಿರುವುದನ್ನು ಕಂಡು ಶಾಸಕ ಕೆ.ಎಸ್.ಬಸವಂತಪ್ಪ ಪಿಡಿಒಗೆ ತರಾಟೆಗೆ ತೆಗೆದುಕೊಂಡರು.
ನಿಮ್ಮ ಬೆಳಗಿನ ಕರ್ತವ್ಯವನ್ನೇ ಸರಿಯಾಗಿ ಮಾಡದ ನೀವು, ಇನ್ನು ಗ್ರಾಮ ಪಂಚಾಯಿತಿ ಕಚೇರಿಗೆ ಸಮಸ್ಯೆಗಳನ್ನು ಹೊತ್ತು ಬರುವ ಜನರಿಗೆ ಯಾವ ರೀತಿ ನ್ಯಾಯ ಒದಗಿಸುತ್ತೀರಿ, ಪರಿಹಾರ ನೀಡ್ತೀರಿ. ಇ-ಸ್ವತ್ತು ಮಾಡಿಕೊಡಲು ಏಕೆ ವಿಳಂಬ ಮಾಡ್ತೀರಿ. ಕಳೆದ ಮೂರು ದಿನಗಳಿಂದ ಹಾಜರಿ ಪುಸ್ತಕದಲ್ಲಿ ಸಹಿ ಹಾಕದಿರುವುದನ್ನು ನೋಡಿದರೆ ನಿಮ್ಮ ಕರ್ತವ್ಯ ಲೋಪ ಎದ್ದು ಕಾಣುತ್ತಿದೆ. ಇದು ಹಿಗೆಯೇ ಮುಂದುವರಿದರೆ ನಿಮ್ಮ ಮೇಲೆ ಕ್ರಮ ತೆಗೆದುಕೊಳ್ಳಲು ಮೇಲಾಧಿಕಾರಿಗಳಿಗೆ ಪತ್ರ ಬರೆಯಲಾಗುವುದು ಎಂದು ಎಚ್ಚರಿಕೆ ನೀಡಿದರು.
ಗ್ರಾಪಂ ವ್ಯಾಪ್ತಿಯ ಜನರು ಯಾವುದೇ ಸಮಸ್ಯೆಗಳನ್ನು ಇಟ್ಟುಕೊಂಡು ಕಚೇರಿಗೆ ಬಂದರೆ ಅವರಿಗೆ ಕೂಡಲೇ ಸ್ಪಂದಿಸುವ ಕೆಲಸ ಮಾಡಬೇಕು. ಇ-ಸ್ವತ್ತಿಗೆ ಅರ್ಜಿ ಸಲ್ಲಿಸಿ ತಿಂಗಳಾದರೂ ಮಾಡಿಕೊಡುವುದಿಲ್ಲ ಎಂಬ ದೂರಿದೆ. ಹಾಗಾದರೆ ಏನು ಕೆಲಸ ಮಾಡ್ತೀರಿ. ಮುಂದಿನ ದಿನಗಳಲ್ಲಿ ರೀತಿ ಆಗಬಾರದು. ಜನರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸುವ ಕೆಲಸ ಮಾಡಬೇಕೆಂದು ತಾಕೀತು ಮಾಡಿದರು. ಈ ಸಂದರ್ಭದಲ್ಲಿ ಪಿಡಿಒ ಬಾಬಣ್ಣ, ಕಾರ್ಯದರ್ಶಿ ಮಂಜಪ್ಪ, ಅಕೌಂಟೆಂಟ್ ನೂರುಲ್ಲಾ ಹಾಗೂ ಸಾರ್ವಜನಿಕರು ಹಾಜರಿದ್ದರು.