ಜೀವನದಲ್ಲಿ ಕರ್ತವ್ಯದಿಂದ ಎಂದೆಂದೂ ವಿಮುಖನಾಗಬೇಡ. ಕೆಲವರು ಫಲ ದೊರೆಯುತ್ತದೆಂಬ ಆಸೆಯಲ್ಲಿ ಕೆಲಸ ಮಾಡುತ್ತಾರೆ. ಕೆಲವರು ಫಲ ದೊರೆಯಲ್ಲಿಲ್ಲವೆಂದು ನಿರಾಸಕ್ತಿ ಹೊಂದುತ್ತಾರೆ. ಆದರೆ ಯಾವುದೇ ಕೆಲಸವನ್ನು ತನ್ನ ಕರ್ತವ್ಯವೆಂದು ತಿಳಿದು ಆಚರಿಸಬೇಕು. ಫಲಕಾಮನೆಯಿಂದ ಆ ಕೆಲಸ ಮಾಡಿದರೆ ಅದು ಕರ್ತವ್ಯ ಎನಿಸುವುದೇ ಇಲ್ಲ. ಮತ್ತು ಫಲಕಾರಿಯೂ ಆಗುವುದಿಲ್ಲ. ಆದ್ದರಿಂದ ಕರ್ತವ್ಯದಲ್ಲಷ್ಟೇ ನಿನಗೆ ಅಧಿಕಾರ ಫಲಗಳಲ್ಲಿ ನಿನಗೆ ಅಧಿಕಾರವಿಲ್ಲ. ಫಲವನ್ನು ಗಳಿಸುವುದಕ್ಕಾಗಿ ಕರ್ಮವನ್ನು ಆಚರಿಸಬೇಡ. ಕರ್ಮವನ್ನು ಮಾಡಬಾರದೆಂಬ ನಿರಾಸಕ್ತಿಯನ್ನೂ ಹೊಂದಬೇಡ. ಇಂಥ ಅದ್ಭುತವಾದ ಜೀವನ ಮೌಲ್ಯವನ್ನು ತಿಳಿಸಿದವನು ಶ್ರೀಕೃಷ್ಣ್ಣಪರಮಾತ್ಮ.
ವೇದವ್ಯಾಸರು ಶ್ರೀಕೃಷ್ಣನ ಮೂಲಕ ಉಪದೇಶಿಸಿದ ಭಗವದ್ಗೀತೆಯಲ್ಲಿ ಕರ್ಮ ಸಿದ್ಧಾಂತವನ್ನು ಅತ್ಯಮೂಲ್ಯವಾಗಿ ನೀಡಲಾಗಿದೆ. ಇದನ್ನೇ ಆಚಾರ್ಯ ಮಧ್ವರೂ ಕೂಡ ಕುರು ಭುಕ್ಷ ಚ ನಿಜಂ ನಿಯತಂ….ಹರಿಪಾದ ವಿನಮ್ರಧಿಯಾ ಸತತ… ಎಂದು ಹೇಳಿದ್ದಾರೆ. ಹರಿಯಲ್ಲಿ ವಿನಮ್ರನಾಗಿದ್ದುಕೊಂಡು ಕರ್ಮ ಮಾಡು ಎಂದು ಹೇಳಿದ್ದಾರೆ. ಕರ್ಮದ ಫಲವೇನಾದರೂ ಇದ್ದರೆ ಅದು ದೇವರು ಕೊಟ್ಟದ್ದು ಎಂದು ತಿಳಿಯಬೇಕು. ಹೀಗಾಗಿ ಕರ್ಮ ಮಾಡುವುದು ನಮ್ಮ ಕರ್ತವ್ಯ. ಹೊರತು ಅದರಿಂದ ಫಲಾಪೇಕ್ಷೆ ನಿರೀಕ್ಷಿಸುವುದು ಸರ್ವಥಾ ಸರಿಯಲ್ಲ. ನಿಸ್ಪೃಹ ರೀತಿಯಿಂದ ಕರ್ಮ ಮಾಡಿದರೆ ಅದಕ್ಕೆ ತಕ್ಕ ಫಲವನ್ನು ದೇವರೆ ನೀಡುತ್ತಾನೆ ಎಂಬ ನಂಬಿಕೆ ಇರಬೇಕು.
ನನ್ನ ಸಂಪತ್ತನ್ನು ರಕ್ಷಣೆ ಮಾಡಿಕೊಳ್ಳುತ್ತಿದ್ದೇನೆ. ಅಯ್ಯೋ ನನ್ನ ಸಂಪತ್ತು ಹಾಳಾಯಿತು ನನ್ನ ಬದುಕು ನನ್ನ ಅಧೀನ ಕಳೆದುಕೊಂಡದ್ದನ್ನು ನಾನು ಮರಳಿ ಪಡೆದುಕೊಂಡೆ ಹೀಗೆ ಬೀಗುವವರು ಅಜ್ಞಾನಿಗಳು. ಏಕೆಂದರೆ ಪರಮಾತ್ಮನ ರಕ್ಷಣೆ ಇದ್ದರೆ ಬೀದಿಯಲ್ಲಿ ಬಿದಿದ್ದೂ ಕೂಡ ಪುನಃ ನಮಗೆ ದೊರೆಯುತ್ತದೆ. ಪರಮಾತ್ಮನ ರಕ್ಷೆ ಇಲ್ಲದಿದ್ದರೂ ಮನೆಯಲ್ಲಿದ್ದರೂ ಕಳೆಯುತ್ತದೆ. ಕಾಡಿನ ಮಧ್ಯೆ ಅನಾಥವಾಗಿ ಬಿದ್ದವನೂ ಕೂಡ ಪರಮಾತ್ಮನ ಅನುಗ್ರಹವಿದ್ದರೆ ಸುಖವಾಗಿ ಬದುಕುತ್ತಾನೆ. ಮನೆಯಲ್ಲಿಟ್ಟು ಬದುಕಿಸಬೇಕೆಂಬ ಪಣತೊಟ್ಟರೂ ಕೂಡ ಪರಮಾತ್ಮನ ಇಚ್ಛೆ ಇಲ್ಲದವನು ಹತನಾಗುತ್ತಾನೆ. ಇದುವೇ ದೈವಲೀಲೆ. ಇದನ್ನು ಅರ್ಥ ಮಾಡಿಕೊಂಡು ಜೀವನ ನಡೆಸಬೇಕು ಎಂಬುದಾಗಿ ಭಾಗವತವು ಜೀವನಮೌಲ್ಯವನ್ನು ತಿಳಿಸುತ್ತದೆ.