ಕಮಲ್ ಹಾಸನ್ ಕೂಡಲೇ ಬೇಷರತ್ ಕನ್ನಡಿಗರ ಕ್ಷಮೆ ಕೇಳಬೇಕು

0
13

ಬೆಂಗಳೂರು: ಮಾತೃಭಾಷೆಯನ್ನು ಪ್ರೀತಿಸಬೇಕು, ಆದರೆ ಅದರ ಹೆಸರಿನಲ್ಲಿ ದುರಭಿಮಾನ ಮೆರೆಯುವುದು ಸಂಸ್ಕೃತಿ ಹೀನ ನಡವಳಿಕೆಯಾಗುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಟೀಕಿಸಿದ್ದಾರೆ.
ತಮಿಳಿನಿಂದಲೇ ಕನ್ನಡ ಎಂದ ನಟ ಕಮಲ್‌ ಹಾಸನ್‌ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿ ಕಲಾವಿದರಿಗೆ ಪ್ರತಿಯೊಂದು ಭಾಷೆಯನ್ನೂ ಗೌರವಿಸುವ ಸಂಸ್ಕಾರ ಇರಬೇಕು. ಕನ್ನಡವೂ ಸೇರಿದಂತೆ ಅನೇಕ ಭಾರತೀಯ ಭಾಷೆಗಳಲ್ಲಿ ನಟಿಸಿರುವ ನಟ
ಕಮಲ್‌ ಹಾಸನ್‌ ತಮ್ಮ ತಮಿಳು ಭಾಷೆಯನ್ನು ವೈಭವಿಕರಿಸುವ ಮತ್ತಿನಲ್ಲಿ ನಟ ಶಿವರಾಜ್ ಕುಮಾರ್ ಅವರನ್ನೂ ಕುಳ್ಳಿರಿಸಿಕೊಂಡು ಕನ್ನಡವನ್ನು ಅವಮಾನಿಸಿರುವುದು ಉದ್ಧಟತನ ಹಾಗೂ ದುರಹಂಕಾರದ ಪರಮಾವಧಿಯಾಗಿದೆ.

ಭಾರತವೂ ಸೇರಿದಂತೆ ವಿಶ್ವದ ಹತ್ತು -ಹಲವು ಕಡೆಗಳಲ್ಲಿ ಕನ್ನಡದ ಹೆಗ್ಗುರುತು ಶತಾಶತಮಾನಗಳಿಂದಲೂ ಪಡಿಮೂಡಿದೆ. ಜಗತ್ತಿನ ಭಾಷೆಗಳಲ್ಲಿ ಕನ್ನಡಕ್ಕೆ ಸರ್ವ ಶ್ರೇಷ್ಠ ಮಾನ್ಯತೆ ಇದೆ ಎಂಬ ಕನಿಷ್ಠ ತಿಳುವಳಿಕೆ ಕಮಲ್ ಹಾಸನ್ ರಂತಹ ಸಂಕುಚಿತ ವ್ಯಕ್ತಿತ್ವವಿರುವ ದುರಾಭಿಮಾನಿ ವ್ಯಕ್ತಿಗಳಿಗೆ ತಿಳಿದಿರಲಿ. ಕನ್ನಡವನ್ನು ಅವಹೇಳನ ಮಾಡುವ ಮುನ್ನ ಕನ್ನಡ ಚಿತ್ರಗಳಲ್ಲೂ ನಟಿಸಿರುವ ಕಮಲ್ ಹಾಸನ್ ಕನ್ನಡ, ಕನ್ನಡಿಗರ ಋಣ ತಮ್ಮ ಮೇಲಿದೆ ಎಂಬ ಔದಾರ್ಯತೆಯನ್ನು ಮರೆತಿದ್ದು ಅವರ ಉಪಕಾರ ಸ್ಮರಣೆಯಿಲ್ಲದ ವ್ಯಕ್ತಿತ್ವವನ್ನು ಅನಾವರಣಗೊಳಿಸಿದೆ.

ದಕ್ಷಿಣ ಭಾರತದಲ್ಲಿ ಸಾಮರಸ್ಯತೆಯನ್ನು ಬೆಸೆಯಬೇಕಾದ ಕಮಲ್ ಹಾಸನ್ ಅವರು ಕಳೆದ ಕೆಲವು ವರ್ಷಗಳಿಂದ ನಿರಂತರವಾಗಿ ಹಿಂದೂ ಧರ್ಮವನ್ನು ಅವಹೇಳನ ಮಾಡುತ್ತಾ ಧಾರ್ಮಿಕ ಭಾವನೆಗಳಿಗೆ ದಕ್ಕೆ ತರುತ್ತಿದ್ದರು. ಇದೀಗ ಆರೂವರೆ ಕೋಟಿ ಕನ್ನಡಿಗರ ಸ್ವಾಭಿಮಾನಕ್ಕೆ ಕೊಳ್ಳಿಯಿಟ್ಟು ಕನ್ನಡವನ್ನು ಅಪಮಾನಿಸಿದ್ದಾರೆ. ಈ ಕೂಡಲೇ ಕಮಲ್ ಹಾಸನ್ ಅವರು ಈ ಕೂಡಲೇ ಬೇಷರತ್ ಕನ್ನಡಿಗರ ಕ್ಷಮೆ ಕೇಳಬೇಕು.

ಯಾವ ಭಾಷೆಯಿಂದ ಯಾವ ಭಾಷೆ ಹುಟ್ಟಿತು ಎಂಬುದನ್ನು ವ್ಯಾಖ್ಯಾನಿಸಲು ಕಮಲ್ ಹಾಸನ್ ಇತಿಹಾಸ ತಜ್ಞರೇನೂ ಅಲ್ಲ. ಆದರೆ ಎರಡೂವರೆ ಸಾವಿರ ವರ್ಷಗಳಿಗೂ ಹೆಚ್ಚಿನ ಇತಿಹಾಸ ಇರುವ ಕನ್ನಡ ಭಾಷೆ ಭಾರತದ ಭೂಪಟದಲ್ಲಿ ಸಮೃದ್ಧತೆಯನ್ನು ಸಂಕೇತಿಸುತ್ತದೆ, ಸೌಹಾರ್ದತೆಯನ್ನು ಪ್ರತಿನಿಧಿಸುತ್ತಿದೆ. ಕನ್ನಡಿಗರು ಭಾಷಾ ದ್ವೇಷಿಗಳಲ್ಲ, ಆದರೆ ಕನ್ನಡ ನಾಡು, ನುಡಿ, ಜನ, ಜಲ, ವಿಚಾರಗಳು ಬಂದಾಗ ಸ್ವಾಭಿಮಾನವನ್ನು ಎಂದಿಗೂ ಬಲಿ ಕೊಟ್ಟಿಲ್ಲ ಎಂಬ ಸತ್ಯ ವಿವೇಕ ಸುಟ್ಟುಕೊಂಡವರಂತೆ ಮಾತನಾಡಿರುವ ಕಮಲ್ ಹಾಸನ್ ಅವರಿಗೆ ನೆನಪಿರಲಿ ಎಂದಿದ್ದಾರೆ.

Previous articleಉಭಯ ಶಾಸಕರ ಪಕ್ಷ ವಿರೋಧಿ ಧೋರಣೆ ವರಿಷ್ಠರಿಗೆ ವರದಿ ಸಲ್ಲಿಕೆ ನಂತರ ಕ್ರಮ
Next articleಆಡಳಿತಾತ್ಮಕ ವೈಫಲ್ಯ ಸರ್ವೇ ಸಾಮಾನ್ಯವಾಗಿಬಿಟ್ಟಿದೆ