ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ಭಗವಾನ್ ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ. ಅವರಿಗೆ 90 ವರ್ಷ ವಯಸ್ಸಾಗಿತ್ತು.
ಇಂದು ಮುಂಜಾನೆ 6 ಗಂಟೆ ಸುಮಾರಿಗೆ ಬೆಂಗಳೂರಿನ ಜಯದೇವ ಆಸ್ಪತ್ರೆಯಲ್ಲಿ ನಿರ್ದೇಶಕ ಭಗವಾನ್ ಕೊನೆಯುಸಿರೆಳೆದಿದ್ದಾರೆ. ಭಗವಾನ್ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಕನ್ನಡ ಚಿತ್ರರಂಗದ ದಿಗ್ಗಜ ಕಲಾವಿದರ ಜೊತೆ ಕೆಲಸ ಮಾಡಿದ್ದ ಭಗವಾನ್ ಅಗಲಿಕೆ ಸ್ಯಾಂಡಲ್ ವುಡ್ ಗೆ ಆಘಾತ ತಂದಿದೆ.
ಬಿ.ದೊರೈ ರಾಜ್ ಹಾಗೂ ಭಗವಾನ್ ಒಟ್ಟಾಗಿ ಸಿನಿಮಾ ನಿರ್ದೇಶನ ಮಾಡುತ್ತಿದ್ದರು. ಹಾಗಾಗಿ ಈ ಜೋಡಿ ದೊರೈ ಭಗವಾನ್ ಎಂದೇ ಹೆಸರಾಗಿತು. 2000ದಲ್ಲಿ ದೊರೈ ರಾಜ್ ವಿಧಿವಶರಾಗಿದ್ದರು. ಈ ಜೋಡಿ ಒಟ್ಟಾಗಿ 27 ಸಿನಿಮಾ ನಿರ್ದೇಶನ ಮಾಡಿತ್ತು.
ಡಾ.ರಾಜ್ ಕುಮಾರ್ ಅವರ 30ಕ್ಕೂ ಹೆಚ್ಚು ಸಿನಿಮಾಗಳನ್ನು ಭಗವಾನ್ ನಿರ್ದೇಶನ ಮಾಡಿದ್ದರು. ಎಲ್ಲಾ ಚಿತ್ರಗಳು ಬಾಕ್ಸ್ ಆಫೀಸ್ ನಲ್ಲಿ ಹಿಟ್ ಆಗಿದ್ದವು. ಕನ್ನಡಕ್ಕೆ ಬಾಂಡ್ ಶೈಲಿಯ ಸಿನಿಮಾಗಳನ್ನು ಪರಿಚಯಿಸಿದ ಹೆಗ್ಗಳಿಕೆ ಭಗವಾನ್ ಅವರಿಗೆ ಸೇರುತ್ತದೆ. 1968ರಲ್ಲಿ ತೆರೆಕಂದ ಡಾ.ರಾಜ್ ಕುಮಾರ್ ಅಭಿನಯದ ಜೇಡರ ಬಲೆ ಕನ್ನಡದ ಮೊದಲ ಬಾಂಡ್ ಶೈಲಿಯ ಸಿನಿಮಾ. ಈ ಚಿತ್ರ ಯಶಸ್ವಿ ಪ್ರದರ್ಶನ ಕಂಡಿತ್ತು.
ಭಗವಾನ್ ನಿಧನಕ್ಕೆ ಕನ್ನಡ ಚಿತ್ರರಂಗವೇ ಕಂಬನಿ ಮಿಡಿದೆ. ಹಿರಿಯ ನಿರ್ದೇಶಕನ ಅಗಲಿಕೆಗೆ ಸಿಎಂ ಬಸವರಾಜ್ ಬೊಮ್ಮಾಯಿ ಸೇರಿದಂತೆ ಹಲವು ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.