ಕನ್ನಡಿಗನಿಗೆ ಮಹಾಕುಂಭ ಮೇಳದ ಉಸ್ತುವಾರಿ

ಪ್ರಯಾಗ್​​ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಪ್ರತಿದಿನ ದೇಶ, ವಿದೇಶಗಳ ಕೋಟ್ಯಂತರ ಜನರು ಪುಣ್ಯ ಸ್ನಾನ ಮಾಡಿ ಧನ್ಯರಾಗುತ್ತಿದ್ದಾರೆ. 144 ವರ್ಷಗಳ ನಂತರ ನಡೆಯುತ್ತಿರುವ ಈ ಐತಿಹಾಸಿಕ ಮಹಾಕುಂಭ ಮೇಳಕ್ಕೂ ಕನ್ನಡಿಗರು ಒಂದು ಸಂಬಂಧವಿರುವುದು ಇನ್ನೂ ವಿಶೇಷ.
ಹೌದು… ಈ ಹಿಂದೆ ನಡೆದ ಮಹಾಕುಂಭ ಮೇಳವನ್ನು ನೋಡಿದವರು ಯಾರೂ ಇಂದು ಇಲ್ಲ. ಇಂದು ನಡೆಯುತ್ತಿರುವ ಮಹಾಕುಂಭ ನೋಡಿದ ನಾವುಗಳು ಮುಂದಿನ 2169ರಲ್ಲಿ ನಡೆಯುವ ಮಹಾಕುಂಭದಲ್ಲಿ ಇರುವುದಿಲ್ಲ. ಆದರೆ, ಈ ಬಾರಿಯ ಮಹಾಕುಂಭ ಮೇಳದ ಸಂಪೂರ್ಣ ಉಸ್ತುವಾರಿ ವಹಿಸಿರುವುದು ಕನ್ನಡಿಗ ಎನ್ನುವುದು ನಮ್ಮ ಹೆಮ್ಮೆ.
ಬೆಂಗಳೂರಿನಲ್ಲಿ ಜನಿಸಿದ ದಕ್ಷ ಐಎಎಸ್​​ ಅಧಿಕಾರಿ ವಿಜಯ ಕಿರಣ್ ಆನಂದ್ ಅವರೇ ಮಹಾಕುಂಭ ಮೇಳದ ನೇತೃತ್ವ ವಹಿಸಿದ್ದಾರೆ.
2009ರ ಉತ್ತರ ಪ್ರದೇಶ ಕೇಡರ್​​ನ ಐಎಎಸ್​​ ಅಧಿಕಾರಿಯಾಗಿರುವ ವಿಜಯ ಕಿರಣ್ ಆನಂದ್ ಅವರು, ಸಿಎ ಪರೀಕ್ಷೆಯಲ್ಲಿಯೂ ಉತ್ತೀರ್ಣರಾಗಿದ್ದಾರೆ. ಈ ಹಿಂದೆ ವಿಜಯ ಕಿರಣ್ ಆನಂದ್ ಗೋರಖ್‌ಪುರ ಜಿಲ್ಲಾಧಿಕಾರಿಯಾಗಿದ್ದರು. ಈ ವೇಳೆ ಅವರ ದಕ್ಷತೆಯನ್ನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹತ್ತಿರದಿಂದ ನೋಡಿದ್ದರು. ಹೀಗಾಗಿ ಈಗ ಪ್ರಯಾಗರಾಜ್ ಜಿಲ್ಲಾಧಿಕಾರಿಯಾಗಿ ಅವರನ್ನೇ ನೇಮಿಸಿ ಮಹಾಕುಂಭ ಮೇಳದ ಮಹತ್ವದ ಜವಾಬ್ದಾರಿಯನ್ನು ನೀಡಿದ್ದಾರೆ.