ಇದೇ ಮೊದಲ ಬಾರಿ ಹೈಕೋರ್ಟ್‌ನಲ್ಲಿ ಕನ್ನಡದಲ್ಲಿ ತೀರ್ಪು ನೀಡುವ ಕೆಲಸವನ್ನು ನ್ಯಾಯಮೂರ್ತಿಗಳಾದ ಕೃಷ್ಣ ದೀಕ್ಷಿತ್ ಮತ್ತು ಸಿ.ಎಂ.ಜೋಷಿ ಕೈಗೊಂಡು ಉತ್ತಮ ಪರಂಪರೆಯನ್ನು ಆರಂಭಿಸಿ ಹೊಸ ಇತಿಹಾಸ ಬರೆದಿದ್ದಾರೆ. ಈ ಪರಂಪರೆ ಮುಂದುವರಿಯಬೇಕು. ಸ್ವಾತಂತ್ರ್ಯ ಬಂದ ದಿನದಿಂದಲೂ ಎಲ್ಲ ಆಡಳಿತ ಕನ್ನಡದಲ್ಲೇ ನಡೆಯಬೇಕು ಎಂಬುದು ಎಲ್ಲರ ಆಶಯ. ಇದು ಹೈಕೋರ್ಟ್‌ಗೂ ಅನ್ವಯಿಸಬೇಕೆಂಬ ಬಯಕೆ ಮೊದಲಿನಿಂದಲೂ ಇತ್ತು. ಈಗ ಇದು ಈಡೇರಿದೆ. ಸ್ಥಳೀಯ ಭಾಷೆಯಲ್ಲಿ ತೀರ್ಪು ನೀಡಿದರೆ ಅದನ್ನು ಜನಸಾಮಾನ್ಯರು ಅರ್ಥ ಮಾಡಿಕೊಂಡು ಕಾನೂನು ರೀತ್ಯ ನಡೆಯಲು ಪ್ರಯತ್ನಿಸುವುದು ಸಹಜ. ಇಂಗ್ಲೀಷ್‌ನಲ್ಲಿ ತೀರ್ಪು ನೀಡಿದರೆ ಬಹುತೇಕ ಜನ ತಮ್ಮ ವಕೀಲರು ಎಷ್ಟು ಹೇಳುತ್ತಾರೋ ಅದನ್ನೇ ತೀರ್ಪು ಎಂದು ತಿಳಿಯುವುದು ಸಹಜ. ಇದರಿಂದ ಎಷ್ಟೋ ಸಂದರ್ಭಗಳಲ್ಲಿ ತಾಂತ್ರಿಕ ಕಾರಣಗಳಿಗಾಗಿ ಮೇಲ್ಮನವಿ ಸಲ್ಲಿಸುವುದು ಹೆಚ್ಚು. ಕೇಂದ್ರ ಸರ್ಕಾರ ಮತ್ತು ಸುಪ್ರೀಂ ಕೋರ್ಟ್ ಇಂಗ್ಲೀಷ್ ಭಾಷೆಯನ್ನು ಮಾಧ್ಯಮವಾಗಿ ಬಳಸುವುದರಿಂದ ಎಲ್ಲ ರಾಜ್ಯಗಳ ಹೈಕೋರ್ಟ್ ಕೂಡ ಇಂಗ್ಲೀಷ್ ಭಾಷೆ ಬಳಸುವುದು ಅನಿವಾರ್ಯ ಎಂದು ಭಾವಿಸಲಾಗಿದೆ. ಆದರೆ ತೀರ್ಪು ನೀಡುವುದು ಜನಸಾಮಾನ್ಯರಿಗೋ ಸರ್ಕಾರಕ್ಕೋ ಎಂಬುದು ತಿಳಿಯುವುದಿಲ್ಲ. ಪ್ರಜಾಪ್ರಭುತ್ವ ಪರಿಣಾಮಕಾರಿಯಾಗಿ ಕೆಲಸ ಮಾಡಬೇಕು ಎಂದರೆ ಸ್ಥಳೀಯ ಭಾಷೆಯಲ್ಲಿ ಆಡಳಿತ ನಡೆಯುವುದು ಸೂಕ್ತ. ಆದರೆ ನಮ್ಮಲ್ಲಿ ಹಲವು ಭಾಷೆಗಳಿರುವುದರಿಂದ ಎಲ್ಲ ಭಾಷೆಗಳಲ್ಲಿ ತೀರ್ಪು ನೀಡುವುದು ಕಷ್ಟ. ನಮ್ಮ ಅನುಕೂಲಕ್ಕೆ ಇಂಗ್ಲೀಷ್ ಭಾಷೆಯನ್ನು ಮಾಧ್ಯಮವಾಗಿ ಬಳಸುತ್ತಿದ್ದೇವೆ. ಈಗ ಭಾಷಾನುವಾದ ಯಾಂತ್ರೀಕರಣಗೊಂಡಿದ್ದು, ಕೃತಕ ಬುದ್ಧಮತ್ತೆ ಬಳಸಿ ಯಾವುದೇ ಒಂದು ಭಾಷೆಯ ತೀರ್ಪನ್ನು ಸುಲಭವಾಗಿ ಅನುವಾದ ಮಾಡಬಹುದು ಎಂದಾಗಿದೆ. ಆದರೆ ರಾಜ್ಯ ಹೈಕೋರ್ಟ್ನ ಇಬ್ಬರು ನ್ಯಾಯಮೂರ್ತಿಗಳು ಕನ್ನಡ ಮತ್ತು ಇಂಗ್ಲೀಷ್‌ನಲ್ಲಿ ಪ್ರತ್ಯೇಕ ತೀರ್ಪು ಬರೆದಿರುವುದು ನಿಜಕ್ಕೂ ಅಭಿನಂದನೀಯ. ರಾಜ್ಯ ಹೈಕೋರ್ಟ್ ಇತರ ನ್ಯಾಯಮೂರ್ತಿಗಳು ಇದೇ ಮಾರ್ಗವನ್ನು ಅನುಸರಿಸಿದರೆ ಅದರಿಂದ ಜನಸಾಮಾನ್ಯರಿಗೆ ನಿಜಕ್ಕೂ ಉಪಕಾರ ಮಾಡಿದಂತಾಗುತ್ತದೆ.
ಸಂಸತ್ತು ಮತ್ತು ವಿಧಾನಮಂಡಲಗಳು ಮಾಡುವ ಕಾಯ್ದೆಗಳನ್ನು ಸ್ಥಳೀಯ ಭಾಷೆಯಲ್ಲಿ ಪ್ರಕಟಿಸುವ ಕೆಲಸ ನಿರಂತರ ನಡೆಯುತ್ತ ಬಂದಿದೆ. ಆದರೂ ನ್ಯಾಯಾಲಯದ ಮೆಟ್ಟಿಲು ಹತ್ತಿದಾಗ ಕನ್ನಡಕ್ಕಿಂತ ಇಂಗ್ಲೀಷ್ ಬಳಸುವುದು ಹೆಚ್ಚು. ಇದಕ್ಕೆ ಪ್ರಮುಖ ಕಾರಣ ಮಾನಸಿಕ ಹಿಂಜರಿಕೆ ಅಷ್ಟೆ. ಕನ್ನಡದ ಮನಸ್ಸು ಇರುವವರು ಸುಲಭವಾಗಿ ಹಾಗೂ ಇಂಗ್ಲೀಷ್‌ಗಿಂತ ಪರಿಣಾಮಕಾರಿಯಾಗಿ ಕನ್ನಡವನ್ನು ಬಳಸಬಲ್ಲರು. ಕನ್ನಡಕ್ಕೆ ಆ ಶಕ್ತಿ ಇದೆ. ಬ್ರಿಟಿಷರು ನಮಗೆ ಇಂಗ್ಲೀಷ್ ಕಲಿಸಿದರು. ನಾವೇ ಇಂಗ್ಲೀಷ್ ದಾಸರಾಗಿದ್ದೇವೆ. ನಮ್ಮ ಮಕ್ಕಳಿಗೆ ಕನ್ನಡ ಬರೋಲ್ಲ ಎಂದು ಹೇಳಿಕೊಳ್ಳುವುದೇ ಈಗ ಹೆಮ್ಮೆಯ ಸಂಗತಿಯಾಗಿದೆ. ಇಂಥ ವಾತಾವರಣದಲ್ಲಿ ಹೈಕೋರ್ಟ್ ಇಬ್ಬರು ನ್ಯಾಯಮೂರ್ತಿಗಳು ನಮ್ಮೆಲ್ಲರ ಕಣ್ಣು ತೆರೆಸಿದ್ದಾರೆ. ಅದರಲ್ಲೂ ಬಹುತೇಕ ಐಎಎಸ್ ಅಧಿಕಾರಿಗಳು ಇವರಿಂದ ಪಾಠ ಕಲಿಯಬೇಕು. ಅವರು ಜನಸಾಮಾನ್ಯರೊಂದಿಗೆ ಕನ್ನಡದಲ್ಲಿ ಸಂಭಾಷಣೆ ನಡೆಸಿದರೆ ಸಾಕು ಎಷ್ಟೋ ಸಮಸ್ಯೆಗಳನ್ನು ಬಗೆಹರಿಸಬಹುದು. ಹೈಕೋರ್ಟ್ ಕನ್ನಡಕ್ಕೆ ಮಹತ್ವ ನೀಡಿದರೆ ಜನಸಾಮಾನ್ಯರಿಗೆ ನ್ಯಾಯಾಂಗದ ಬಗ್ಗೆ ಇರುವ ವಿಶ್ವಾಸ ಇನ್ನೂ ಅಧಿಕಗೊಳ್ಳುತ್ತದೆ. ನ್ಯಾಯಾಂಗ-ಕಾರ್ಯಾಂಗ-ಶಾಸಕಾಂಗ ಕನ್ನಡವನ್ನೇ ಬಳಸಿದರೆ ಎಷ್ಟೋ ಸಮಸ್ಯೆಗಳು ಸುಲಭವಾಗಿ ಬಗೆಹರಿಯುತ್ತದೆ. ಜನರಿಗೆ ಅರ್ಥವಾಗುವ ಭಾಷೆಯಲ್ಲಿ ಹೇಳಿದರೆ ಅವರು ಮತ್ತೆ ಮತ್ತೆ ನ್ಯಾಯಾಲಯದ ಮೆಟ್ಟಿಲು ಹತ್ತುವುದು ತಪ್ಪಲಿದೆ. ಅಲ್ಲದೆ ಕನ್ನಡದಲ್ಲಿ ಬಂದ ತೀರ್ಪನ್ನು ಲಕ್ಷಾಂತರ ಜನ ತಿಳಿದುಕೊಂಡು ಅದರಂತೆ ನಡೆಯುವುದು ಸಹಜ. ಅದೇ ತೀರ್ಪು ಇಂಗ್ಲಿಷ್‌ನಲ್ಲಿ ಬಂದರೆ ಜನಸಾಮಾನ್ಯರು ಇಂಗ್ಲಿಷ್ ಬಲ್ಲವರನ್ನು ಆಶ್ರಯಿಸುವುದು ಅನಿವಾರ್ಯ. ಇಂಗ್ಲೀಷ್ ಬಲ್ಲವರು ತಮ್ಮ ಸ್ವಾರ್ಥಕ್ಕೆ ಸಂದರ್ಭವನ್ನು ಬಳಸಿಕೊಳ್ಳಬಹುದು. ಹೀಗಾಗಿ ನ್ಯಾಯಾಂಗದ ಉದ್ದೇಶವೇ ಈಡೇರುವುದಿಲ್ಲ. ಇದನ್ನು ಅರಿತೇ ಇಂಗ್ಲೀಷ್ ಬಲ್ಲವರೇ ಕನ್ನಡದಲ್ಲಿ ಎಲ್ಲವೂ ಬರಬೇಕು ಎಂದು ಒತ್ತಾಯಿಸಿದ್ದಾರೆ. ಸಿಎನ್‌ಆರ್ ರಾವ್, ಪ್ರೊ. ಯು.ಆರ್. ರಾವ್ ತಮ್ಮ ತಮ್ಮ ಕ್ಷೇತ್ರದಲ್ಲಿ ಮಹತ್ತರ ಸಾಧನೆ ಮಾಡಿದವರು. ಅವರ ಕನ್ನಡ ಪ್ರೇಮ ಅಚಲ. ಒಬ್ಬ ವಿಜ್ಞಾನಿಗೆ ತಾನು ಪಡೆದು ಕೊಂಡಿರುವ ಜ್ಞಾನವನ್ನು ನಿಜವಾಗಿಯೂ ಜನಸಾಮಾನ್ಯರಿಗೆ ತಲುಪಿಸಬೇಕೆಂಬ ಕಳಕಳಿ ಹೊಂದಿದ್ದರೆ ಸ್ಥಳೀಯ ಭಾಷೆಯಲ್ಲೇ ಹೇಳಬೇಕು. ಆಗ ಅದಕ್ಕೆ ಅರ್ಥ ಬರುತ್ತದೆ. ಎಲ್ಲ ರಂಗಗಳಲ್ಲಿ ಸಾಧನೆ ಮಾಡಿದವರು ಕನ್ನಡದಲ್ಲಿ ಹೇಳಲು ಆರಂಭಿಸಿದರೆ ನಮ್ಮ ಜನಸಾಮಾನ್ಯರ ಜ್ಞಾನದ ಪರಿಧಿ ವಿಸ್ತಾರಗೊಳ್ಳುವುದರಲ್ಲಿ ಸಂದೇಹವಿಲ್ಲ. ಸರ್ಕಾರ ಕನ್ನಡದಲ್ಲಿ ತೀರ್ಪು ನೀಡಲು ಬೇಕಾದ ಸವಲತ್ತುಗಳನ್ನು ನ್ಯಾಯಮೂರ್ತಿಗಳಿಗೆ ಕಲ್ಪಿಸಿಕೊಡಬೇಕು. ಹಿಂದೆ ರಾಜ ಮಹಾರಾಜರು ಜನಸಾಮಾನ್ಯರಿಗೆ ಏನನ್ನೂ ತಿಳಿಸದೆ ಆಡಳಿತ ನಡೆಸುತ್ತಿದ್ದರು. ಈಗ ಪ್ರಜಾಪ್ರಭುತ್ವದಲ್ಲಿ ಅದಕ್ಕೆ ಅವಕಾಶವಿಲ್ಲ. ಪಾರದರ್ಶಕತೆ ಬರಬೇಕು ಎಂದರೆ ಜನಸಾಮಾನ್ಯರ ಭಾಷೆಯಲ್ಲಿ ಆಡಳಿತ ನಡೆಯಬೇಕು. ಅಧಿಕಾರದಲ್ಲಿರುವವರು ಕನ್ನಡದ ಮನಸ್ಸು ಹೊಂದಿದರೆ ರಾಜ್ಯದ ಸಮಗ್ರ ಬೆಳವಣಿಗೆ ಕೂಡ ತ್ವರಿತಗೊಳ್ಳುವುದರಲ್ಲಿ ಸಂದೇಹವಿಲ್ಲ.