ಬೀದರ್: ಆತ್ಮಹತ್ಯೆ ಮಾಡಿಕೊಂಡ ಯುವ ಗುತ್ತಿಗೆದಾರ ಸಚಿನ್ ಪಾಂಚಾಳ್‌ರ ದುಃಖ ತಪ್ತ ಕುಟುಂಬಕ್ಕೆ ಒಂದು ಕೋಟಿ ರೂ.ಗಳ ಪರಿಹಾರ ನೀಡುವಂತೆ ಮತ್ತು ಪ್ರಕರಣದ ತನಿಖೆಯನ್ನು ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ಒಪ್ಪಿಸುವಂತೆ ರಾಜ್ಯ ಸರ್ಕಾರಕ್ಕೆ ಬಿಜೆಪಿ ರಾಜ್ಯ ಶಾಖೆ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಒತ್ತಾಯಿಸಿದರು.
ಆತ್ಮಹತ್ಯೆ ಮಾಡಿಕೊಂಡ ಸಚಿನ್ ಪಾಂಚಾಳ್‌ರ ಬೀದರ್ ಜಿಲ್ಲೆ ಭಾಲ್ಕಿ ತಾಲ್ಲೂಕಿನ ಕಟ್ಟಿತೂಗಾಂವ್ ಗ್ರಾಮಕ್ಕೆ ತಮ್ಮ ನೇತೃತ್ವದಲ್ಲಿನ ಬಿಜೆಪಿ ರಾಜ್ಯ ಉನ್ನತ ಮಟ್ಟದ ನಿಯೋಗದೊಂದಿಗೆ ಭಾನುವಾರ ಮುಸ್ಸಂಜೆ ಭೇಟಿ ನೀಡಿ ಸಾಂತ್ವನ ಹೇಳಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಸಚಿನ್ ಪಂಚಾಳ್‌ರ ದು:ಖತಪ್ತ ಕುಟುಂಬದ ಸದಸ್ಯರಲ್ಲಿನ ಓರ್ವರಿಗೆ ಸರ್ಕಾರಿ ನೌಕರಿ ನೀಡುವಂತೆ ಕೂಡ ಅವರು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದರು. ಸಚಿನ್ ಪಾಂಚಾಳ್ ಆತ್ಮಹತ್ಯೆ ಪ್ರಕರಣದ ತನಿಖೆ ಸ್ಥಳೀಯ ಪೊಲೀಸರಿಂದ ತಾರ್ಕಿಕ ಅಂತ್ಯ ಕಾಣುವುದು ಅನುಮಾನವಾಗಿರುವುದರಿಂದ ಪ್ರಕರಣದ ತನಿಖೆಯನ್ನು ರಾಜ್ಯ ಸರ್ಕಾರ ಸಿಬಿಐಗೆ ವಹಿಸುವಂತೆ ಸರ್ಕಾರಕ್ಕೆ ಎಂದು ಬಿ.ವೈ.ವಿಜಯೇಂದ್ರ ಬಲವಾಗಿ ಪ್ರತಿಪಾದಿಸಿದರು.
ಪೊಲೀಸರ ವರ್ತನೆ: ಆಕ್ರೋಶ
ಸಚಿನ್ ಕುಟುಂಬದ ಸದಸ್ಯರಿಂದ ತಕ್ಷಣ ದೂರು ಸ್ವೀಕರಿಸದೆ ಅವರನ್ನು ಪೊಲೀಸರು ಠಾಣೆಯಿಂದ ಠಾಣೆಗೆ ಅಲೆದಾಡಿಸಿ ಅಮಾನವೀಯತೆಯಿಂದ ವರ್ತಿಸಿದ್ದಾರೆ ಎಂದು ಬಿಜೆಪಿ ರಾಜ್ಯ ಶಾಖೆ ಅಧ್ಯಕ್ಷರು ಆಕ್ರೋಶದ ಧ್ವನಿಯಲ್ಲಿ ನುಡಿದರು.
ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣ ಸ್ವಾಮಿ ಹಾಗೂ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿ ಕುಮಾರ್ ಮಾತನಾಡಿ ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದೆ ಎಂದರು. ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ, ಶಾಸಕ ಸಿದ್ದು ಪಾಟೀಲ್, ಎಮ್‌ಎಲ್‌ಸಿ ಶಶೀಲ್ ನಮೋಶಿ, ಎಮ್‌ಎಲ್‌ಸಿ ಎಮ್.ಜಿ.ಮುಳೆ, ಮಾಜಿ ಶಾಸಕ ಪ್ರಕಾಶ್ ಖಂಡ್ರೆ, ಬಿಜೆಪಿ ಬೀದರ್ ಜಿಲ್ಲಾ ಘಟಕದ ಅಧ್ಯಕ್ಷ ಸೋಮನಾಥ ಪಾಟೀಲ್, ಪಕ್ಷದ ಮುಖಂಡ ಬಾಬು ವಾಲಿ, ಬಿಜೆಪಿ ಬೀದರ್ ಜಿಲ್ಲಾ ಶಾಖೆಯ ಮಾಧ್ಯಮ ವಿಭಾಗದ ಪ್ರಮುಖ್ ಶ್ರೀನಿವಾಸ್ ಚೌಧರಿ ಮತ್ತು ಬಿಜೆಪಿ ಕಲಬುರಗಿ ಜಿಲ್ಲಾ ಶಾಖೆ ಅಧ್ಯಕ್ಷ ಶಿವರಾಜ್ ಪಾಟೀಲ್ ರದ್ದೆವಾಡಗಿ ಮತ್ತು ಬಿಜೆಪಿ ಕಲಬುರಗಿ ನಗರ ಶಾಖೆ ಅಧ್ಯಕ್ಷ ಚಂದು ಪಾಟೀಲ್ ಆದಿಯಾಗಿ ಪಕ್ಷದ ಇನ್ನೂ ಅನೇಕರು ನಿಯೋಗದಲ್ಲಿ ಪಾಲ್ಗೊಂಡಿದ್ದರು.
ಧನ ಸಹಾಯ ಸ್ವೀಕರಿಸಲು ನಿರಾಕರಣೆ
ಸಚಿನ್ ಪಾಂಚಾಳ್‌ರ ದು:ಖತಪ್ತ ಕುಟುಂಬಕ್ಕೆ ಬಿಜೆಪಿ ರಾಜ್ಯ ಶಾಖೆ ಅಧ್ಯಕ್ಷ ಬಿ.ವೈ.ವಿಜಯೇಂದ್ರ ವೈಯಕ್ತಿಕವಾಗಿ ಧನ ಸಹಾಯ ನೀಡಲು ಅಣಿಯಾದಾಗ ಅದನ್ನು ಸ್ವೀಕರಿಸಲು ಯುವ ಗುತ್ತಿಗೆದಾರ ಸಚಿನ್ ಪಾಂಚಾಳ್ ಕುಟುಂಬದ ಸದಸ್ಯರು ನಿಕಾರಿಸಿದರಲ್ಲದೆ ನಮಗೆ ನ್ಯಾಯ ಬೇಕು ಎಂದು ಕಣ್ಣೀರಿಡುತ್ತಾ ನುಡಿದರು.