ಓಪಿಎಸ್ ಜಾರಿಗೆ ಸರ್ಕಾರ ಬದ್ಧ

0
26

ಚನ್ನಗಿರಿ: ಚುನಾವಣೆ ಪೂರ್ವದಲ್ಲಿ ರಾಜ್ಯ ಸರ್ಕಾರಿ ನೌಕರರಿಗೆ ನೀಡಿದ್ದ ಓ.ಪಿ.ಎಸ್ ಜಾರಿಗೊಳಿಸುವ ಭರವಸೆ ಈಡೇರಿಸಲು ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.
ಶನಿವಾರ ಬೆಳಿಗ್ಗೆ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಹೋಗುವ ಮಾರ್ಗಮಧ್ಯೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರ ಕೊಟ್ಟ ಭರವಸೆಯಂತೆ ರಾಜ್ಯದ ಎಲ್ಲಾ ಸರ್ಕಾರಿ ನೌಕರರಿಗೆ ಓ.ಪಿ.ಎಸ್.ನ್ನು ಮುಂದಿನ ಕೆಲವೇ ದಿನಗಳಲ್ಲಿ ಜಾರಿಗೊಳಿಸಲು ತೀರ್ಮಾನಿಸಲಾಗಿದೆ ಎಂದರು.
ಮುಖ್ಯಮಂತ್ರಿಗಳು ಶಿಕ್ಷಣ ಕ್ಷೇತ್ರಕ್ಕೆ ಈ ಬಾರಿಯ ಬಜೆಟ್‌ನಲ್ಲಿ ಅಧಿಕ ಅನುದಾನ ನೀಡಿದ್ದು, ರಾಜ್ಯದಲ್ಲಿ ಕೆ.ಪಿ.ಎಸ್ ಶಾಲೆಗಳಿಗೆ ಹೆಚ್ಚಿನ ಬೇಡಿಕೆ ಇದ್ದು, ಪ್ರಸ್ತುತ ೩೦೦ ಕೆ.ಪಿ.ಎಸ್. ಶಾಲೆಗಳಿದ್ದು, ಈ ವರ್ಷ ಮತ್ತೆ ೫೦೦ಕ್ಕೂ ಹೆಚ್ಚು ಶಾಲೆಗಳನ್ನು ತೆರೆಯಲಾಗುವುದು ಎಂದು ಹೇಳಿದರು.
ಮಕ್ಕಳಲ್ಲಿ ಮಾನವೀಯ ಮೌಲ್ಯಗಳು ಕ್ಷೀಣಿಸುತ್ತಿರುವುದರಿಂದ ಪ್ರಸಕ್ತ ಶೈಕ್ಷಣಿಕ ವರ್ಷದಿಂದ ೧ನೇ ತರಗತಿಯಿಂದ ೧೦ನೇ ತರಗತಿ ವಿದ್ಯಾರ್ಥಿಗಳಿಗೆ ನೈತಿಕ ಶಿಕ್ಷಣ ಬೋಧನೆ ಮಾಡುವ ಉದ್ದೇಶ ಹೊಂದಲಾಗಿದೆ. ವಾರದಲ್ಲಿ ಎರಡು ದಿನ ನೈತಿಕ ಶಿಕ್ಷಣ, ಎರಡು ದಿನ ಬರವಣಿಗೆ, ಎರಡು ದಿನ ಓದುವ ಹವ್ಯಾಸಗಳ ಬಗ್ಗೆ ತಿಳಿಸಲಾಗುವುದು. ಎಲ್.ಕೆ.ಜಿ, ಯು.ಕೆ.ಜಿ ಶಾಲೆಗಳಿಗೂ ರಾಜ್ಯದಲ್ಲಿ ಅಧಿಕ ಬೇಡಿಕೆ ಇದ್ದು, ಅವುಗಳನ್ನು ತೆರೆಯಲು ಸಿದ್ಧತೆಗಳು ನಡೆಯುತ್ತಿವೆ. ಶಾಲೆಗಳಲ್ಲಿ ಪೆನ್ನು ಹಿಡಿಯುವ ಕೈಗಳಿಗೆ ಪೊರಕೆ ನೀಡುವುದು ಸರಿಯಲ್ಲ, ನಮ್ಮ ರಾಜ್ಯದಲ್ಲಿ ಎಲ್ಲಿಯಾದರೂ ವಿದ್ಯಾರ್ಥಿಗಳ ಕೈಗೆ ಪೊರಕೆ ನೀಡಿದರೆ ಅಂತವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದರು.
ಅನುದಾನಿತ ಶಾಲೆಗಳಿಗೆ ೬ ಸಾವಿರ ಶಿಕ್ಷಕರು, ಕಲ್ಯಾಣ ಕರ್ನಾಟಕ ಭಾಗಕ್ಕೆ ೫ಸಾವಿರ ಶಿಕ್ಷಕರು, ಇನ್ನುಳಿದ ಭಾಗಕ್ಕೆ ೫ ಸಾವಿರ ಶಿಕ್ಷಕರನ್ನು ತೆಗೆದುಕೊಳ್ಳಲು ಈಗಾಗಲೇ ಹಣಕಾಸು ಇಲಾಖೆಯಿಂದ ಒಪ್ಪಿಗೆ ಸಿಕ್ಕಿದ್ದು, ಸದ್ಯದಲ್ಲಿಯೇ ನೇಮಕಾತಿ ಪ್ರಕ್ರಿಯೆ ನಡೆಯಲಿದೆ ಎಂದು ತಿಳಿಸಿದರು.

Previous articleಗಾಂಜಾ ಸೇವಿಸುತ್ತಿದ್ದ ಯುವಕರಿಂದ ಅಬಕಾರಿ ಇಲಾಖೆ ಸಿಬ್ಬಂದಿ ಮೇಲೆ ಹಲ್ಲೆ
Next articleಭೇದ ಭಾವ ಮಾಡದೇ ಕಾನೂನು ಶಿಕ್ಷಣ ನೀಡಿದ ಡಾ. ಜಿ.ಎಂ. ಪಾಟೀಲ