ಹದಿನಾರು ಬಾರಿ ಮುಂಗಡ ಪತ್ರ ಮಂಡಿಸುವ ಅಗ್ನಿಪರೀಕ್ಷೆಯನ್ನು ಲೀಲಾಜಾಲವಾಗಿ ಎದುರಿಸಿ ಸಾರ್ವಜನಿಕ ಮನ್ನಣೆಗೆ ಪಾತ್ರವಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅನುಭವದಲ್ಲಿ ಎದ್ದು ಕಾಣುವುದು ಉದ್ಯೋಗ ಸೃಷ್ಟಿಯ ಮೂಲಕ ನಿರುದ್ಯೋಗದ ಪೆಡಂಭೂತವನ್ನು ಓಡಿಸುವುದು. ಸರ್ಕಾರದ ಮೂಲಕ ಇಂತಹ ಸಾಧನೆಯನ್ನು ಕ್ರಾಂತಿಯ ರೂಪದಲ್ಲಿ ಮಾಡುವುದು ಕಷ್ಟ-ಆದರೆ, ಅಸಾಧ್ಯವಾದದ್ದೇನೂ ಅಲ್ಲ. ಏಕೆಂದರೆ, ಇದಕ್ಕೆ ಬೇಕಾದದ್ದು ಸಾರ್ವಜನಿಕ ಅಭಿಯಾನ. ಡಿಗ್ರಿಗಳನ್ನು ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾದವರೂ ಕೂಡಾ ಉದ್ಯೋಗಕ್ಕೆ ಪರದಾಡುವ ಸ್ಥಿತಿಗೆ ಪ್ರೇರಣೆಯಾಗಿರುವುದು ಕೌಶಲ್ಯದ ಕೊರತೆ. ಸಾಂಪ್ರದಾಯಿಕ ಶಿಕ್ಷಣ ವ್ಯವಸ್ಥೆಯಲ್ಲಿ ಇಂತಹ ಕೌಶಲ್ಯ ಶಿಕ್ಷಣಕ್ಕೆ ಇದ್ದ ಪ್ರಾತಿನಿಧ್ಯ ತೀರಾ ಕಡಿಮೆ. ಇದರ ಪರಿಣಾಮ ಅರ್ಹತೆ ಇದ್ದ ಯುವಕರೂ ಕೂಡಾ ನಿರುದ್ಯೋಗಿಗಳಾಗುವ ದುಸ್ಥಿತಿ.
ಇಂತಹ ಪರಿಸ್ಥಿತಿಯನ್ನು ಕಣ್ಣಲ್ಲಿ ಕಣ್ಣಿಟ್ಟು ಗಮನಿಸಿರುವ ಮುಖ್ಯಮಂತ್ರಿಗಳು ಕೌಶಲ್ಯ ಕೇಂದ್ರಗಳ ಅಭಿವೃದ್ಧಿಗೆ ಮುಂಗಡ ಪತ್ರದಲ್ಲಿ ಹಣ ಮೀಸಲಿಡುವ ಜೊತೆಗೆ ಭಾರತವನ್ನು ಕೌಶಲ್ಯದ ಕಾಶಿಯಂತೆ ರೂಪಿಸುವ ಮಹತ್ವಾಕಾಂಕ್ಷಿ ಯೋಜನೆಯನ್ನು ಪ್ರಕಟಿಸಿರುವುದು ನಿಜಕ್ಕೂ ಶ್ಲಾಘನೀಯ. ಉದ್ಯೋಗಗಳು ಬದಲಾದ ಕಾಲಮಾನದಲ್ಲಿ ಸರ್ಕಾರದ ಮಟ್ಟದಲ್ಲಿ ಸೃಷ್ಟಿಯಾಗುವುದು ಕಡಿಮೆ. ಕಾರಣಾಂತರಗಳಿಂದ ತೆರವಾಗಿರುವ ಹುದ್ದೆಗಳ ಭರ್ತಿಗೂ ಮೀನಾ ಮೇಷ ಎಣಿಸುವ ಪರಿಸ್ಥಿತಿ. ಆದರೆ, ಖಾಸಗಿ ಕ್ಷೇತ್ರ ಹೆಚ್ಚು ಸಕ್ರಿಯವಾಗಿರುವ ಹಿನ್ನೆಲೆಯಲ್ಲಿ ವಿದ್ಯಾವಂತರು ಮೊದಲು ಗಮನಿಸುವುದು ಖಾಸಗಿ ಕಂಪನಿಗಳ ಸ್ಥಾನಗಳ ಮೂಲಕ. ಬೇಡಿಕೆ ಹಾಗೂ ಪೂರೈಕೆ ಎಂಬುದು ಔದ್ಯಮಿಕ ನೀತಿ. ಇದು ಉದ್ಯೋಗಕ್ಕೂ ಅನ್ವಯವಾಗುವ ಮಾತು. ಓದಿದರೆ ಮಾತ್ರ ಕೈತುಂಬಾ ಸಂಬಳ ತರುವ ಹುದ್ದೆ ಬರುತ್ತದೆ ಎಂಬ ಕಾಲ ಇದಲ್ಲ. ಓದಿನ ಜ್ಞಾನವನ್ನು ಕೌಶಲ್ಯದ ಮೂಲಕ ಕಾರ್ಯರೂಪಕ್ಕೆ ತರುವ ಚಾಕಚಕ್ಯತೆ ಇರುವವರಿಗೆ ಮಾನ್ಯತೆ. ಈಗಂತೂ ಜಗತಿನಾದ್ಯಂತ ಜಾರಿಯಲ್ಲಿರುವ ನೀತಿ. ಕೇಂದ್ರ ಸರ್ಕಾರ ಬಹಳ ವರ್ಷಗಳ ಹಿಂದೆ ರೂಪಿಸಿದ ಕೌಶಲ್ಯ ವಿಕಾಸ ನೀತಿಯನ್ನು ಅಳವಡಿಸಿಕೊಂಡು ರಾಜ್ಯಗಳಲ್ಲೂ ಕೌಶಲ್ಯ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ. ಆದರೆ, ಈ ಕೇಂದ್ರಗಳಿಗೆ ಸಂಪನ್ಮೂಲದ ಕೊರತೆ ಜೊತೆಗೆ ಖಚಿತ ಗುರಿಯನ್ನು ರಾಜ್ಯ ಸರ್ಕಾರ ಇದುವರೆಗೆ ಕೊಟ್ಟಿರಲಿಲ್ಲ. ಈ ಬಾರಿಯ ಮುಂಗಡ ಪತ್ರ ಅಂತಹ ಒತ್ತು ಸಿಕ್ಕಿರುವುದು ನಿಜವಾದ ಅರ್ಥದಲ್ಲಿ ಕೌಶಲ್ಯದ ಕ್ರಾಂತಿಯ ಮುನ್ನುಡಿ.
ಓದಿನ ಜ್ಞಾನಕ್ಕೆ ಕೌಶಲ್ಯವೆಂಬುದು ದೋಣಿ. ಈ ದೋಣಿಯನ್ನು ನಡೆಸುವ ಅಂಬಿಗನನ್ನು ನಂಬಿದರೆ ಉದ್ಯೋಗ ಸೃಷ್ಟಿ ಸಾಧ್ಯತೆಗಳಿಗೆ ಹೊಸ ಆಯಾಮ ತಂದುಕೊಡುವುದಂತೂ ಖಚಿತ.
೧೯೬ ಪುಟಗಳ ಈ ಬಾರಿಯ ಮುಂಗಡ ಪತ್ರದಲ್ಲಿ ಸವಿಸ್ತಾರವಾಗಿ ಹಣಕಾಸಿನ ಸ್ಥಿತಿಗತಿ ಹಾಗೂ ಆದ್ಯತಾ ವಲಯಕ್ಕೆ ಕೊಡಲೇಬೇಕಾದ ಪ್ರಾಧಾನ್ಯತೆಯನ್ನು ವಿವರಿಸುತ್ತಲೇ ಹಂತ ಹಂತವಾಗಿ ವರ್ತಮಾನದಲ್ಲಿ ಜನರ ಬದುಕು ಸುಲಲಿತವಾಗಲು ಪ್ರಸ್ತಾಪಿಸಿರುವ ಕಾರ್ಯಕ್ರಮಗಳ ಹಿಂದಿರುವುದು ಜನರನ್ನು ಒಪ್ಪಿಸುವ ನೀತಿಯಲ್ಲ – ಬದಲಿಗೆ ಜನರಿಗೆ ನೆರವಾಗುವ ನೀತಿ. ನೀರಾವರಿ ಕ್ಷೇತ್ರಕ್ಕೆ ೨೨೧೮೧ ಕೋಟಿ ಅನುದಾನ ಘೋಷಣೆ ಮಾಡಲಾಗಿದೆ. ಆದರೂ ಇನ್ನಷ್ಟು ಹಣ ಮೀಸಲಿಡಬೇಕಾಗಿತ್ತು ಎಂದು ಹೇಳುವವರು ಇದ್ದಾರೆ. ಆದರೆ, ಕಾವೇರಿ ಹಾಗೂ ಕೃಷ್ಣಾ ಕೊಳ್ಳದ ಯೋಜನೆಗಳು ಹಲವು ನ್ಯಾಯಾಲಯಗಳು ಹಾಗೂ ನೆರೆ ರಾಜ್ಯಗಳ ಜೊತೆ ಮಾತುಕತೆಯ ಹಂತದಲ್ಲಿರುವ ಕಾರಣ ಹೆಚ್ಚಿನ ಹಣ ಒದಗಿಸುವುದು ಅಸಾಧ್ಯ. ಇದೇ ಮಾತನ್ನು ಕೈಗಾರಿಕಾ ಕ್ಷೇತ್ರಕ್ಕೆ ಹೇಳುವಂತಿಲ್ಲ. ಶಿಕ್ಷಣ ಕ್ಷೇತ್ರಕ್ಕೆ ಒದಗಿಸಿರುವ ಹಣದ ಪ್ರಮಾಣದ ಬಗ್ಗೆ ತಕರಾರು ಇಲ್ಲದಿದ್ದರೂ ಗ್ರಾಮೀಣ ಪ್ರದೇಶಗಳ ಶಾಲೆಗಳಲ್ಲಿ ಆದುನಿಕ ಸೌಲಭ್ಯಗಳ ಸೃಷ್ಟಿಗೆ ಇನ್ನಷ್ಟು ಔದಾರ್ಯ ತೋರಬಹುದಿತ್ತು ಎನ್ನುವ ಮಾತುಗಳು ಕೇಳಿಬರುತ್ತಿರುವುದು ನಿಜ. ೪,೦೯,೫೪೯ ಕೋಟಿ ರೂಪಾಯಿ ಗಾತ್ರದ ಮುಂಗಡ ಪತ್ರದಲ್ಲಿ ಆದಾಯ ಹಾಗೂ ವೆಚ್ಚದ ಪ್ರಮಾಣವನ್ನು ಸರಿದೂಗಿಸಲು ನಾನಾ ರೀತಿಯ ಚಿಂತನ ಮಂಥನಗಳು ಮಾಡಿರುವ ಹಿಂದೆ ಸಿದ್ದರಾಮಯ್ಯನವರ ಐದು ದಶಕಗಳ ರಾಜಕೀಯ ಜ್ಞಾನ ಹಾಗೂ ಅನುಭವ ಎದ್ದು ಕಾಣುತ್ತದೆ. ಬಹುಶಃ ಕೇಂದ್ರದ ತೆರಿಗೆ ಪಾಲು ರಾಜ್ಯಕ್ಕೆ ನ್ಯಾಯಯುತವಾಗಿ ಹಂಚಿಕೆಯಾಗಿದ್ದರೆ ಇನ್ನಷ್ಟು ಹೊಸ ಯೋಜನೆಗಳನ್ನು ರೂಪಿಸಲು ಅವಕಾಶವಿರುತ್ತಿತ್ತೇನೋ.
ಪಕ್ಷಿ ನೋಟದಂತೆ ಈ ಮುಂಗಡಪತ್ರವನ್ನು ಗಮನಿಸಿದಾಗ ಬೀದರ್‌ನಿಂದ ಹಿಡಿದು ಚಾಮರಾಜನಗರದವರೆಗೆ ಎಲ್ಲಾ ಜಿಲ್ಲೆಗಳಿಗೂ ಸರಿಸಮಾನವಾಗಿ ಯೋಜನೆ ಹಾಗೂ ಕಾರ್ಯಕ್ರಮಗಳು ರೂಪಿತವಾಗಿರುವುದು ಕಂಡುಬರುತ್ತದೆ. ಸ್ವಾಭಾವಿಕವಾಗಿಯೇ ಜಗತ್ತಿನ ಕಣ್ಮಣಿಯಾಗುತ್ತಿರುವ ಬೆಂಗಳೂರಿಗೆ ನಾನಾ ಯೋಜನೆಗಳ ಜಾರಿಗೆ ಉದಾರವಾಗಿ ಕೊಟ್ಟಿರುವ ಹಣ ಸಮರ್ಪಕವಾಗಿಯೇ ಇದೆ. ಇದು ಕೇವಲ ಗ್ಯಾರಂಟಿ ಮುಂಗಡ ಪತ್ರ ಎಂಬುದು ಕುರುಡನೊಬ್ಬ ಆನೆಯನ್ನು ಬಣ್ಣಿಸುವ ರೀತಿಯಷ್ಟೆ. ೨೦೨೩-೨೪ರ ಮುಂಗಡಪತ್ರದಲ್ಲಿ ಐದು ಗ್ಯಾರಂಟಿಗಳ ಯೋಜನೆಗಳನ್ನು ಪ್ರಕಟಿಸಿದಾಗ ಟೀಕೆಗಳ ಮೇಲೆ ಟೀಕೆಗಳನ್ನು ಪ್ರಯೋಗಿಸಿದ ಮುಖಂಡರು ನಂತರದ ದಿನಗಳಲ್ಲಿ ಹಲವು ರಾಜ್ಯಗಳಲ್ಲಿ ಇದೇ ಗ್ಯಾರಂಟಿಗಳನ್ನು ನಕಲು ಮಾಡಿದ್ದು ಪರಿಸ್ಥಿತಿಯ ಅಸಲಿ ಮುಖ. ಯಾರು ಏನೇ ಹೇಳಲಿ, ಗ್ಯಾರಂಟಿ ಫಲಾನುಭವಿಗಳ ಬದುಕು ಹಸನಾಗುತ್ತಿರುವುದಂತೂ ಖಂಡಿತ. ಶಕ್ತಿ, ಗೃಹ ಲಕ್ಷ್ಮಿ, ಗೃಹಜ್ಯೋತಿ, ಅನ್ನಭಾಗ್ಯ, ಯುವನಿಧಿ ಯೋಜನೆಗಳ ಫಲಾನುಭವಿಗಳು ನಿಯಮಿತವಾಗಿ ಸರ್ಕಾರದಿಂದ ನೇರವಾಗಿ ಹಣ ಪಡೆಯುವ ಸೌಲಭ್ಯದ ಮೂಲಕ ಬದುಕನ್ನು ಕಟ್ಟಿಕೊಳ್ಳುತ್ತಿರುವ ಕೀರ್ತಿ ನಿಜಕ್ಕೂ ದಾಖಲರ್ಹ. ಇದನ್ನು ವಿಸ್ತೃತವಾಗಿ ಹಾಗೂ ಅಮೂಲಾಗ್ರವಾಗಿ ಪರಿಶೀಲಿಸಿದಾಗ ಅರ್ಥಶಾಸ್ತ್ರಜ್ಞರ ಮಟ್ಟದಲ್ಲಿ ಚಿಂತಿಸಿ ನೆಲಮಟ್ಟದಲ್ಲಿ ಪರಿಸ್ಥಿತಿಯನ್ನು ಅಳೆದು ರೂಪಿಸಿರುವ ಮುಂಗಡಪತ್ರ ಇದಾಗಿದೆ ಎಂಬ ಮಾತನ್ನು ನಿರಾಕರಿಸುವುದು ಕಷ್ಟವೇ.