ಒಳಮೀಸಲಾತಿ: ಸಂಪುಟ, ಹೈಕಮಾಂಡ್ ಜತೆ ಚರ್ಚಿಸಿ ತೀರ್ಮಾನ

0
17

ಕೊಪ್ಪಳ: ಒಳಮೀಸಲಾತಿ ವಿಚಾರವಾಗಿ ಸುಪ್ರೀಂ ಕೋರ್ಟ್ ನಿರ್ಧಾರ ತಿಳಿಸಿದೆ. ಈ ಬಗ್ಗೆ ಸಚಿವ ಸಂಪುಟದಲ್ಲಿ ಚರ್ಚಿಸಿ, ಹೈಕಮಾಂಡ್ ಜತೆ ಮಾತನಾಡಬೇಕು ಬಳಿಕ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ತಾಲೂಕಿನ ಬಸಾಪುರ ಖಾಸಗಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಒಳಮೀಸಲಾತಿ ವಿಚಾರವಾಗಿ ಮಾತನಾಡಿದ ಅವರು, ಜಾತಿ ಗಣತಿ ವರದಿ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಈ ಬಗ್ಗೆ ಬಸವರಾಜ ರಾಯರಡ್ಡಿ ನನ್ನ ಜತೆ ಮಾತನಾಡಿರುವುದು ಸತ್ಯ. ಮುಂದಿನ ವಾರ ಹಿಂದುಳಿದ ವರ್ಗಗಳ ಇಲಾಖೆಯ ಅಧಿಕಾರಿಗಳು ಮತ್ತು ಸಚಿವರ ಜತೆ ಚರ್ಚೆ ಮಾಡುತ್ತೇವೆ. ಜಾತಿ ಜನಗಣತಿ ಬಗ್ಗೆ ಸಚಿವ ಸಂಪುಟದಲ್ಲಿ ಚರ್ಚಿಸಲಾಗುವುದು. ಬಳಿಕ ಅಧಿವೇಶನದಲ್ಲಿ ಮಂಡಿಸಬೇಕು. ಕೊನೆಗೆ ವರದಿಯನ್ನು ಅನುಷ್ಠಾನ ಮಾಡುತ್ತೇವೆ ಎಂದರು.
ನಾನು ಅಧಿಕಾರದಲ್ಲಿದ್ದರೆ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಗಳು ದುರ್ಬಲ ಆಗುತ್ತವೆ ಎಂಬ ಭಯ ಇದೆ. ಹಾಗಾಗಿ ನನ್ನ ವಿರುದ್ಧ ವೈಯಕ್ತಿಕವಾಗಿ ಜೆಡಿಎಸ್‌ನ ಎಚ್.ಡಿ. ಕುಮಾರಸ್ವಾಮಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಅಲ್ಲದೇ ಎಫ್ಐಆರ್ ಆದ ತಕ್ಷಣ ರಾಜೀನಾಮೆ ಕೊಡಬೇಕಿಲ್ಲ. ಸಿದ್ದರಾಮಯ್ಯನವರೇ ಸಿಎಂ ಆಗಿ ಮುಂದುವರೆಯಬೇಕು ಎಂದು ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ. ದೇವೇಗೌಡ ಹೇಳಿರುವುದು ಏನು ಅರ್ಥ. ಅವರೇ ಹೇಳಿದ್ದರೆ ಅದು ಸತ್ಯ ಎಂದರು.
ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷರು ಮತ್ತು ಸತೀಶ ಜಾರಕಿಹೊಳಿ ಸಚಿವರು. ಇಬ್ಬರು ನಮ್ಮ ಪಕ್ಷದವರೇ ಆಗಿದ್ದು, ಇಬ್ಬರೂ ಚರ್ಚಿಸಿದ್ದರಲ್ಲಿ ತಪ್ಪೇನಿದೆ. ಇದಕ್ಕೆ ಬೇರೆ ಅರ್ಥ‌ ಕಲ್ಪಿಸುವುದು ಏನು. ಊಹಾಪೋಹ ಬಿಡಬೇಕು. ಒಳ್ಳೆಯದನ್ನು ಮಾಡಬೇಕು. ಕೆಟ್ಟದ್ದನ್ನು ಮಾಡಬಾರದು ಎಂದರು.
ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ್, ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ ಪಾಟೀಲ್, ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಸಚಿವ ಶಿವರಾಜ್ ತಂಗಡಗಿ, ಸಂಸದ ಕೆ.ರಾಜಶೇಖರ್ ಹಿಟ್ನಾಳ್, ಶಾಸಕ ಕೆ.ರಾಘವೇಂದ್ರ ಹಿಟ್ನಾಳ್ ಇದ್ದರು.

Previous articleಐದು ವರ್ಷ ಸಿದ್ದರಾಮಯ್ಯನವರೇ ಸಿಎಂ
Next articleಬೈಕ್‌ ಲಾರಿ ಡಿಕ್ಕಿ: ಇಬ್ಬರ ಸಾವು