ಉಳ್ಳಾಲ: ಖ್ಯಾತ ತುಳು ರಂಗಭೂಮಿ ಕಲಾವಿದ, ಒರಿಯರ್ದೊರಿ ಅಸಲ್ ತುಳು ಸಿನಿಮಾದಲ್ಲಿ ತೆಂಗಿನ ಕಾಯಿ ಕೀಳುವ ನಾಥು ಪಾತ್ರದ ಖ್ಯಾತಿಯ, ಅಶೋಕ್ ಶೆಟ್ಟಿ ಅಂಬ್ಲಮೊಗರು(53) ಅವರು ಸೋಮವಾರ ಬೆಳಿಗ್ಗೆ ನಿಧನರಾದರು.
ಸೋಮವಾರ ಬೆಳಿಗ್ಗೆ ಅಂಬ್ಲಮೊಗರುವಿನ ಮನೆಯಲ್ಲಿ ತೀವ್ರ ಅಸ್ವಸ್ಥರಾಗಿದ್ದ ಅವರನ್ನು ಆಸ್ಪತ್ರೆಗೆ ಸಾಗಿಸುವ ದಾರಿಯಲ್ಲಿ ಮೃತ ಪಟ್ಟಿದ್ದಾರೆ. ವೃತ್ತಿಪರ ಕಲಾವಿದರಾದ ಅಶೋಕ್ ಅವರು ವಿಜಯ ಕುಮಾರ್ ಕೊಡಿಯಾಲ್ ಬೈಲ್ ಅವರ ಕಲಾಸಂಗಮ ನಾಟಕ ತಂಡದಲ್ಲಿ ಸುದೀರ್ಘ ಕಾಲದ ಕಲಾ ಸೇವೆ ಸಲ್ಲಿಸಿದ್ದರು. ನಾಟಕ, ಸಿನೆಮಾ, ಧಾರವಾಹಿಗಳಲ್ಲಿ ನಟಿಸಿದ್ದ ಅವರು ಅನೇಕ ನಾಟಕಗಳನ್ನೂ ರಚಿಸಿದ್ದರು. ಅವರ ಅಗಲಿಕೆಗೆ ತುಳು ರಂಗಭೂಮಿ ಮತ್ತು ತುಳು ಸಿನೆಮಾ ರಂಗದ ಅನೇಕ ಗಣ್ಯರು ಸಂತಾಪ ವ್ಯಕ್ತ ಪಡಿಸಿದ್ದಾರೆ. ಮೃತರಿಗೆ ಪತ್ನಿ, ಇಬ್ಬರು ಪುತ್ರರು ಸೇರಿದಂತೆ ಅಪಾರ ಬಂಧು ಬಳಗ ಇದ್ದಾರೆ.