ಎಸ್.ಎಂ. ಕೃಷ್ಣ ಅವರ ಅಂತ್ಯಸಂಸ್ಕಾರಕ್ಕೆ ಒಂದು ಸಾವಿರ ಕೆಜಿಯಷ್ಟು ಶ್ರೀಗಂಧದ ಮರದ ತುಂಡುಗಳನ್ನು ಬಳಸಲಾಗಿದೆ. ಒಂದು ಟನ್ ಶ್ರೀಗಂಧದ ಜೊತೆಗೆ ಸುಮಾರು ೫೦ ಕೆಜಿಯಷ್ಟು ಹಸುವಿನ ತುಪ್ಪ ಮತ್ತು ಇನ್ನಿತರ ಪರಿಕರಗಳನ್ನು ಅಂತ್ಯಸಂಸ್ಕಾರ ಪ್ರಕ್ರಿಯೆಯಲ್ಲಿ ಬಳಸಲಾಯಿತು.
ಮೈಸೂರಿನ ಅಶೋಕಪುರಂನದಲ್ಲಿರುವ ರಾಜ್ಯ ಅರಣ್ಯ ಇಲಾಖೆಯ ಶ್ರೀಗಂಧದ ಕೋಠಿಯಿಂದ ವಿವಿಧ ಆಕಾರದ ಈ ಗಂಧದ ತುಂಡುಗಳನ್ನು ತರಲಾಗಿತ್ತು. ಇಲಾಖೆಯ ವಾಹನದಲ್ಲಿ ಗಂಧದ ತುಂಡುಗಳನ್ನು ತುಂಬಿಕೊಂಡು ಬಂದ ಅರಣ್ಯಾಧಿಕಾರಿಗಳು ಇದನ್ನು ಮಂಡ್ಯ ಜಿಲ್ಲಾಧಿಕಾರಿ ಕುಮಾರ್ ಅವರ ವಶಕ್ಕೆ ನೀಡಿದರು. ಬಳಿಕ ಇವನ್ನು ಅಂತ್ಯಸಂಸ್ಕಾರ ನಡೆಯುವ ಸ್ಥಳಕ್ಕೆ ಸಾಗಿಸಲಾಯಿತು.
ಗಂಧದ ಬೆಳೆಗೆ ಉತ್ತೇಜನ: ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದ ಸಮಯ, ಶ್ರೀಗಂಧ ಬೆಳೆಯಲು ಸಾಮಾನ್ಯ ರೈತರಿಗೂ ಅವಕಾಶ ನೀಡುವ ಕಾನೂನು ರೂಪಿಸಿದ್ದರು. ಆರ್ಥಿಕವಾಗಿ ಬಹಳ ಲಾಭದಾಯಕವಾಗಿರುವ ಹಿನ್ನೆಲೆಯಲ್ಲಿ ಮಂಡ್ಯದಲ್ಲಿ ಹಲವು ರೈತರು ಶ್ರೀಗಂಧದ ಗಿಡಗಳನ್ನು ನೆಟ್ಟು ಗಂಧದ ನೆಡು ತೋಪುಗಳ ನಿರ್ಮಾಣಕ್ಕೂ ಕಾರಣರಾಗಿದ್ದನ್ನು ನೆನಪಿಸಿಕೊಳ್ಳಬಹುದು.
ಕೃಷ್ಣ ಅವರು ಗಂಧದ ಮರ ಬೆಳೆಯಲು ಅವಕಾಶ ನೀಡಿದ್ದ ಹಿನ್ನೆಲೆಯಲ್ಲಿ ಇಂತಹ ಸುಮಾರು ೪೦೦ ಮರಗಳನ್ನು ಬೆಳೆಸಿರುವ ರೈತೋದ್ಯಮಿ ದೇವರಾಜು ಎಂಬುವವರು ಅಂತ್ಯಸಂಸ್ಕಾರಕ್ಕಾಗಿ ತಾವು ಬೆಳೆಸಿದ ಗಂಧದ ಮರದ ತುಂಡುಗಳನ್ನು ತಂದಿದ್ದರು. ಗಂಧ ಬೆಳೆಯುವ ಅವಕಾಶ ನೀಡಿದ ಕೃಷ್ಣ ಅವರಿಗೆ ತಾವು ಕೃತಜ್ಞರಾಗಿರುವುದಾಗಿಯೂ ಇವರು ಈ ಸಮಯ ತಿಳಿಸಿದರು.