ಮಲ್ಲಿಕಾರ್ಜುನ ಚಿಲ್ಕರಾಗಿ
ಬಳ್ಳಾರಿ: ರಾಜ್ಯದ ಆರೋಗ್ಯ ಇಲಾಖೆಗೆ ಕಳಪೆ ಐವಿ(ಇಂಟ್ರಾವೆನಸ್) ದ್ರಾವಣ ಪೂರೈಕೆ ಮೂಲಕ ಬಾಣಂತಿಯರ ಸರಣಿ ಸಾವಿಗೆ ಕಾರಣವಾಗಿದ್ದ ಪಶ್ಚಿಮ ಬಂಗಾಳ ಮೂಲದ ‘ಪಶ್ಚಿಮ ಬಂಗಾ ಫಾರ್ಮಾಸ್ಯುಟಿಕಲ್ ಪ್ರೈ. ಲಿ.’ ಕಂಪನಿಯ ಔಷಧ ಉತ್ಪಾದನೆ ಮತ್ತು ಕಾರ್ಯಚರಣೆಯನ್ನು ಸಿಡಿಎಸ್‌ಸಿಒ(ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಜೇಶನ್) ಸ್ಥಗಿತಗೊಳಿಸಿ ಆದೇಶಿಸಿದೆ.
ಪಶ್ಚಿಮ ಬಂಗಾಳದ ಉತ್ತರ ದಿನಜಪುರದಲ್ಲಿರುವ ಕಂಪನಿಯ ಔಷಧ ಉತ್ಪಾದನಾ ಮತ್ತು ಸರಬರಾಜು ಘಟಕದ ಗೋದಾಮಿಗೆ ಕೊಲ್ಕತ್ತಾ ಸೆಂಟ್ರಲ್ ಡ್ರಗ್ಸ್ ಕಂಟ್ರೋಲ್ ಸಮಿತಿ ಮತ್ತು ಸಿಲಿಗುರಿ ಪ್ರಾದೇಶಿಕ ವಿಭಾಗದ ಡ್ರಗ್ಸ್ ಕಂಟ್ರೋಲ್, ಡ್ರಗ್ಸ್ ನಿಯಂತ್ರಣ ನಿರ್ದೇಶನಾಲಯ ಪಶ್ಚಿಮ ಬಂಗಾಳ ಸರಕಾರದ ಅಧಿಕಾರಿಗಳ ಜಂಟಿ ಸಮಿತಿಯು ಡಿ. ೪, ೫ ಮತ್ತು ೬ರಂದು ಖುದ್ದಾಗಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೂರು ದಿನಗಳ ಕಾಲ ಕಂಪನಿಯ ಔಷಧ ಉತ್ಪಾದನೆ, ಕಾರ್ಯಚರಣೆಯ ಪರಿಶೀಲನೆ ಬಳಿಕ ಔಷದ ಉತ್ಪಾದನೆಯಲ್ಲಿ ಈ ಖಾಸಗಿ ಕಂಪನಿ ಹಲವು ಲೋಪದೋಷಗಳನ್ನು ಎಸಗಿರುವುದನ್ನು ಪತ್ತೆ ಹಚ್ಚಿದೆ. ದಾಖಲೆಗಳು, ಔಷಧೀಯ ಪರಿಕರಗಳನ್ನು ತಪಾಸಣೆ ಮಾಡಿದ ಬಳಿಕ ಹಲವು ನ್ಯೂನತೆಗಳು ಕಂಡು ಬಂದಿವೆ. ಅಲ್ಲದೇ ಸೆಂಟ್ರಲ್ ಡ್ರಗ್ಸ್ ಕಂಟ್ರೋಲ್‌ನಿಂದ ನೀಡಲಾದ ಹಲವು ಷರತ್ತುಗಳನ್ನು ಪೂರೈಸುವಲ್ಲಿ ಪಶ್ಚಿಮ ಬಂಗಾಳ ಫಾರ್ಮಸ್ಯುಟಿಕಲ್ ಕಂಪನಿ ವಿಫಲವಾಗಿದೆ ಎನ್ನುವುದು ಪರಿಶೀಲನೆಯಲ್ಲಿ ಗೊತ್ತಾಗಿದೆ. ವಿಶೇಷವಾಗಿ ಔಷಧ ತಯಾರಿಕೆಯ ಭಾಗವಾದ ಪೇರೆಂಟೆರಲ್ ಗುಣಮಟ್ಟದಲ್ಲಿಯೇ ಸಂಶಯ ಮೂಡಿದೆ. ಇದೇ ಕಾರಣಕ್ಕೆ ಈ ಕಂಪನಿ ತಯಾರಿಸುವ ಗ್ಲೂಕೋಸ್, ಲವಣಗಳು, ಅಮೈನೋ ಆಮ್ಲಗಳಲ್ಲಿ ಸಮಸ್ಯೆ ಇದೆ ಎನ್ನುವುದು ಮೇಲ್ನೋಟಕ್ಕೆ ಜಂಟಿ ಸಮಿತಿಗೆ ಕಂಡು ಬಂದಿದೆ.
ಬಂದ್ ಮಾಡಲು ಸೂಚನೆ: ಔಷಧ ಉತ್ಪಾದನೆ, ಕಾರ್ಯಚರಣೆಯ ಲೋಪಗಳನ್ನು ಗಮನಿಸಿರುವ ಸಿಡಿಎಸ್‌ಸಿಒ, ಇಝಡ್ ತಪಾಸಣಾ ವರದಿಯಲ್ಲಿ ಉಲ್ಲೇಖಿಸಿರುವ ಅಂಶಗಳನ್ನು ಸರಿಪಡಿಸುವವರೆಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಡ್ರಗ್ಸ್ ಮತ್ತು ಕಾಸ್ಮೆಟಿಕ್ಸ್ ಆಕ್ಟ್ ಮತ್ತು ನಿಯಮಗಳು ೧೯೪೫ರ ನಿಯಮ ೮೫(೨)ರ ಪ್ರಕಾರ ಸಂಸ್ಥೆಯ ಉತ್ಪಾದನಾ ಚಟುವಟಿಕೆಯನ್ನು ನಿಲ್ಲಿಸಲು ಜಂಟಿ ಸಮಿತಿ ನೋಟಿಸ್ ಜಾರಿ ಮಾಡಿದೆ. ಜಂಟಿ ಸಮಿತಿ ಸೂಚನೆ ಮೇರೆಗೆ ಕಳಪೆ ದ್ರಾವಣ ಪೂರೈಸಿ ಸಾವಿಗೆ ಕಾರಣವಾಗಿದ್ದ ಕಂಪನಿಗೆ ಸದ್ಯಕ್ಕೆ ತಾತ್ಕಾಲಿಕವಾಗಿ ಬೀಗ ಬಿದ್ದಂತಾಗಿದೆ.
ಉನ್ನತ ಸಮಿತಿ ಜವಾಬ್ದಾರಿ ಬಾಕಿ
ಇನ್ನು ಪಶ್ಚಿಮ ಪಂಗಾಳ ಮೂಲದ ಫಾರ್ಮಾಸ್ಯುಟಿಕಲ್ ಕಂಪನಿಯಿಂದಾಗಿ ಕರ್ನಾಟಕದಲ್ಲಿಯೇ ಹೆಚ್ಚು ಜೀವ ಹಾನಿಯಾಗಿದೆ. ಬಳ್ಳಾರಿ, ರಾಯಚೂರು, ದಾವಣಗೆರೆ ಸೇರಿ ಹಲವು ಕಡೆಗಳಲ್ಲಿ ಬಾಣಂತಿಯರು ಸಾವನ್ನಪ್ಪಿದ್ದಾರೆ. ಈ ಬಗ್ಗೆ ಸರಕಾರ ಪ್ರಾಥಮಿಕ ತನಿಖೆ ನಡೆಸಿ ಕಂಪನಿಯನ್ನು ಕಪ್ಪು ಪಟ್ಟಿಗೆ ಸೇರಿಸಿದೆ. ಈ ಬಗ್ಗೆ ಬೆಳಗಾವಿ ಅಧಿವೇಶನದಲ್ಲೂ ಚರ್ಚೆಗಳು ನಡೆದಿವೆ. ಆದರೆ ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಲು ಐಎಎಸ್ ಅಧಿಕಾರಿ ಕನಗವಲ್ಲಿ ನೇತೃತ್ವದಲ್ಲಿ ರಚಿಸಿದ ಉನ್ನತ ಸಮಿತಿ ತನಿಖೆಯ ಪ್ರಗತಿ ಏನಾಗಿದೆಯೋ? ತಿಳಿದಿಲ್ಲ. ಈಗ ಈ ಉನ್ನತ ಸಮಿತಿ ತನಿಖೆ ನಡೆಸಿ ಕಂಪನಿ ವಿರುದ್ಧ ಕ್ರಮ ಕೈಗೊಳ್ಳಲು ಇದು ಸಕಾಲವಾಗಿದೆ.