ಐತಿಹಾಸಿಕ ಚಂದ್ರಮೌಳೀಶ್ವರ ದೇಗುಲಕ್ಕೆ ನಟಿ ಸಾರಾ ಅಲಿ ಖಾನ್ ಭೇಟಿ

0
38

ಹುಬ್ಬಳ್ಳಿ: ಖ್ಯಾತ ಹಿಂದಿ ನಟಿ ಸಾರಾ ಅಲಿ ಖಾನ್ ಇತ್ತೀಚೆಗೆ ಹುಬ್ಬಳ್ಳಿಯ ಐತಿಹಾಸಿಕ ಸುಂದರ ತಾಣವಾದ ಚಂದ್ರಮೌಳೀಶ್ವರ ದೇಗುಲಕ್ಕೆ ಭೇಟಿ ನೀಡಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಕಲ್ಯಾಣ ಚಾಲುಕ್ಯರ ಕಾಲದಲ್ಲಿ ನಿರ್ಮಾಣವಾಗಿರುವ ಈ ಭವ್ಯಶಿಲ್ಪ ಕಲಾಕೃತಿಯ ಮುಂದೆ ಸಾರಾ ಅಲಿ ಖಾನ್ ತೆಗೆಸಿಕೊಂಡಿರುವ ಚಿತ್ರವನ್ನು ಶಾಸಕ ಮಹೇಶ ಟೆಂಗಿನಕಾಯಿ ಅವರು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಶುಕ್ರವಾರ ಪೋಸ್ಟ್ ಮಾಡಿಕೊಂಡ ನಂತರ ವಿಷಯ ಸದ್ದು ಮಾಡಲಾರಂಭಿಸಿದೆ.
ಹುಬ್ಬಳ್ಳಿಯ ಉಣಕಲ್ ಮುಖ್ಯ ರಸ್ತೆಯಲ್ಲಿ ಅಮರಶಿಲ್ಪಿ ಜಕಣಾಚಾರಿ ಕೆತ್ತರಿವ ಈ ಭವ್ಯ ದೇಗುಲವಿದ್ದು, ಸಂಪೂರ್ಣ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಇದನ್ನು ಸಂರಕ್ಷಿಸಿ ಅಭಿವೃದ್ಧಿ ಮಾಡಬೇಕು. ರಾಜ್ಯದ ಐತಿಹಾಸಿಕ ತಾಣಗಳ ಪಟ್ಟಿಯಲ್ಲಿ ಇದು ಬಂದು, ಪ್ರವಾಸೋದ್ಯಮದ ಪ್ರಮುಖ ಸ್ಥಳವಾಗಬೇಕು ಎಂಬ ಅಭಿಯಾನವನ್ನು ಶಾಸಕರು ಕಳೆದ ಎರಡು ತಿಂಗಳಿನಿಂದ ಆರಂಭಿಸಿದ್ದಾರೆ.
ಇದಕ್ಕೆ ಪೂರಕವಾಗಿ ವಿಧಾನಸಭೆಯ ಅಹವಾಲು ಸಮಿತಿಯ ಅಧ್ಯಕ್ಷರೂ ಆಗಿರುವ ಉಪ ಸಭಾಧ್ಯಕ್ಷ ರುದ್ರಪ್ಪ ಲಮಾಣಿ ಮತ್ತು ಇತರ ಪ್ರಮುಖರನ್ನು ಕರೆದೊಯ್ದು ಸ್ಮಾರಕದ ನಿರ್ಲಕ್ಷ್ಯವನ್ನು ವಿವರಿಸಿದ್ದಾರೆ. ಹೀಗಾಗಿ ಕಳೆದ ಒಂದು ತಿಂಗಳಿನಿಂದ ವಿಧಾನಸಭೆ ಅಹವಾಲು ಸಮಿತಿ ಸಭೆಗಳಲ್ಲಿ ಚಂದ್ರಮೌಳೀಶ್ವರ ದೇಗುಲ ಅಭಿವೃದ್ಧಿಗೆ ಪೂರಕವಾಗಿ ಸರ್ಕಾರ ಏನು ಮಾಡಬೇಕು ಎಂಬ ಚರ್ಚೆಗಳು ಆರಂಭವಾಗಿವೆ.
ಈ ಸ್ಮಾರಕದ ಸುತ್ತಮುತ್ತ ಇರುವ ನಿವಾಸಿಗಳ ಪುನರ್ವಸತಿಗಾಗಿ ಸ್ಥಳ ಗುರುತಿಸಬೇಕು. ನಂತರ ಸ್ಮಾರಕವನ್ನು ಉಣಕಲ್ ಮುಖ್ಯರಸ್ತೆಯಿಂದ ಎದ್ದು ಕಾಣುವಂತೆ ಪ್ರವಾಸೋದ್ಯಮಕ್ಕೆ ಪೂರಕವಾದ ಯೋಜನೆಗಳನ್ನು ಸಿದ್ಧಪಡಿಸಬೇಕು. ಬೇಲೂರು-ಹಳೆಬೀಡು ಮಾದರಿಯಲ್ಲಿ ಆಕರ್ಷಣೀಯ ತಾಣ ಮಾಡಬೇಕು ಎಂಬುದಾಗಿ ಕಳೆದ ಅಹವಾಲು ಸಮಿತಿ ಸಭೆಯಲ್ಲಿ ಶಾಸಕರು ಒತ್ತಾಯಿಸಿದ್ದರು. ಇದರ ಪರಿಣಾಮವಾಗಿ ಧಾರವಾಡ ಜಿಲ್ಲಾಧಿಕಾರಿಗಳಿಗೆ ಉನ್ನತ ಸಭೆ ನಡೆಸುವ ಹೊಣೆಯನ್ನು ವಹಿಸಲಾಗಿದ್ದು, ಈ ಸಂಬಂಧ ಪ್ರಕ್ರಿಯೆ ಜಾರಿಯಲ್ಲಿದೆ.

Previous articleರಾಜ್ಯ ಕಾಂಗ್ರೆಸ್ ಸರ್ಕಾರದಿಂದ‌‌ ಸೇಡಿನ ರಾಜಕೀಯ
Next articleಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ  ರಾಜೀನಾಮೆ