ಕೆರೆ ಒತ್ತುವರಿ, ಹೂಳೆತ್ತುವ ಬಹು ವರ್ಷಗಳ ಬೇಡಿಕೆ: ಒತ್ತುವರಿ ಪ್ರದೇಶ, ಹಿನ್ನೀರು ಪ್ರದೇಶ ಪರಿಶೀಲನೆ
ದಾವಣಗೆರೆ: ಏಷ್ಯಾ ಖಂಡದಲ್ಲೇ ಎರಡನೇ ಅತಿದೊಡ್ಡ ಕೆರೆಯಾದ ಸೂಳೆಕೆರೆ (ಶಾಂತಿಸಾಗರ) ಹಿನ್ನೀರು ಪ್ರದೇಶಕ್ಕೆ ಶುಕ್ರವಾರ ಬೆಳ್ಳಂಬೆಳಗ್ಗೆ ಉಪಲೋಕಾಯುಕ್ತ ಬಿ.ವೀರಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಸೂಳೆಕೆರೆಯು ಒತ್ತುವಾರಿಯಾಗಿದ್ದು, ಒತ್ತುವರಿ ತೆರವುಗೊಳಿಸಿ ಹೂಳೆತ್ತಿಸಬೇಕೆಂದು ಈ ಭಾಗದ ಹಾಗೂ ಜಿಲ್ಲೆಯ ರೈತರು ಹೋರಾಟ ನಡೆಸುವ ಮೂಲಕ ಜಿಲ್ಲಾಡಳಿತಕ್ಕೆ ಒತ್ತಡ ಹಾಕಲಾಗುತ್ತಿದೆ. ಅಷ್ಟೆ ಅಲ್ಲದೇ ಜಿಲ್ಲಾಧಿಕಾರಿಗಳು ರೈತ ಮುಖಂಡರ ಸಭೆ ಕರೆದು ಕೆರೆ ಹೂಳೆತ್ತುವ ಮತ್ತು ಕೆರೆ ಒತ್ತುವರಿ ತೆರವುಗೊಳಿಸುವ ಬಗ್ಗೆ ತೀರ್ಮಾನ ತೆಗೆದುಕೊಂಡು ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಆದರೆ ಈವರೆಗೂ ಕಾರ್ಯರೂಪಕ್ಕೆ ಬಂದಿರಲಿಲ್ಲ. ರೈತರ ಈ ಕೂಗು ಮುಂದುವರಿದಿದೆ.
ಹೀಗಾಗಿ ಚನ್ನಗಿರಿ ತಾಲೂಕಿನ ಶಾಂತಿಸಾಗರ ಹಿನ್ನೀರು ಪ್ರದೇಶದ ಜಮೀನುಗಳಿಗೆ ಉಪಲೋಕಾಯುಕ್ತರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಸೂಳೆಕೆರೆ ಒಟ್ಟು 5447.10 ಎಕರೆ ಪ್ರದೇಶ ಹೊಂದಿದೆ. ಇದರಲ್ಲಿ ಪ್ರಸ್ತುತ 219.10 ಎಕರೆ ಒತ್ತುವರಿಯಾಗಿದೆ ಎಂದು ಗುರುತಿಸಲಾಗಿದೆ. ಕೆರೆಯಲ್ಲಿನ ಹೂಳೆತ್ತುವ ಮೂಲಕ ಅಧಿಕ ನೀರು ಸಂಗ್ರಹ ಸಾಧ್ಯವಿದೆ. ಇದರಿಂದ ಅಂತರ್ಜಲ ಮಟ್ಟ ಹೆಚ್ಚಿಸಲು ಸಹಕಾರಿ, ಜೊತೆಗೆ ನೀರಿನ ಸಂಗ್ರಹ ಸಾಮರ್ಥ್ಯವು ಹೆಚ್ಚಲಿದೆ. ರೈತರು ಸಹ ಇದಕ್ಕೆ ಸಹಕಾರ ನೀಡಬೇಕೆಂದರು.
ನಂತರ ಕೆರೆಯು ಒತ್ತುವರಿ ಆದ ಭಾಗದಲ್ಲಿ ಸುತ್ತಾಡಿ ಒತ್ತುವರಿಯಾದ ಪ್ರದೇಶವನ್ನು ಪರಿಶೀಲನೆ ನಡೆಸಿದರು.
ಬಳಿಕ ಬೋಟಿಂಗ್ ವ್ಯವಸ್ಥೆಯನ್ನು ಪರಿಶೀಲನೆ ನಡೆಸಿದ ಉಪಲೋಕಾಯುಕ್ತರು, ಪ್ರವಾಸಿಗರು ಬಂದಾಗ ಯಾವ ರೀತಿ ಅವರಿಗೆ ಬೋಟಿಂಗ್ ವ್ಯವಸ್ಥೆ ಕಲ್ಪಿಸಿತ್ತೀರಿ, ಅವರ ಪ್ರಾಣ ರಕ್ಷಣೆ ಯಾವ್ಯಾವ ರಕ್ಷಣಾ ಕವಚ ತೋಡಿಸ್ತಿರಿ, ಅವರ ಜೊತೆಯಲ್ಲಿ ಪರಿಣತಿ ಪಡೆದ ತರಬೇತಿದಾರ ಇರುತ್ತಾನೋ ಇಲ್ಲವೋ, ಪ್ರವಾಸಿಗರಿಗೇ ಬೋಟಿಂಗ್ ನೀಡಿ ನೀವು ಅವರನ್ನು ನೋಡ್ತಿರೋ ಎಂಬ ಹಲವಾರು ಪ್ರಶ್ನೆಗಳನ್ನು ಕೇಳಿದರು.
ಇತ್ತೀಚಿನ ದಿನಗಳಲ್ಲಿ ರಾಜ್ಯದ ವಿವಿಧ ಭಾಗಗಳಲ್ಲಿ ಬೋಟಿಂಗ್ ಮಾಡುವ ಸಂದರ್ಭದಲ್ಲಿ ಬೋಟ್ ಮಗುಚಿ ಹಲವಾರು ಜನರು ಉಸಿರು ಚೆಲ್ಲಿರುವುದನ್ನು ದಿನ ದಿನನಿತ್ಯ ನಾವು ಗಮನಿಸುತ್ತಿದ್ದೇವೆ. ಈ ನಿಟ್ಟಿನಲ್ಲಿ ಇಲ್ಲಿಗೆ ಬರುವ ಪ್ರವಾಸಿಗರ ರಕ್ಷಣೆಯು ಅಷ್ಟೇ ಪ್ರಾಮುಖ್ಯತೆ ಪಡೆದಿದೆ. ಬೋಟಿಂಗ್ ನಿರ್ವಹಣೆ ಮಾಡುವವರು ಪ್ರವಾಸಿಗರ ಬಗ್ಗೆ ಬಹಳ ಕಾಳಜಿ ವಹಿಸಬೇಕೆಂದು ಸೂಚನೆ ನೀಡಿದರು.
ಈ ವೇಳೆ ಉಪಲೋಕಾಯುಕ್ತರೊಂದಿಗೆ ಲೋಕಾಯುಕ್ತ ಅಪರ ನಿಬಂಧಕರಾದ ಕೆ.ಎಂ.ರಾಜಶೇಖರ್, ಉಪನಿಬಂಧಕರಾದ ಅರವಿಂದ್ ಎನ್.ವಿ, ಮಿಲನ ವಿ.ಎನ್, ಹಿರಿಯ ಸಿವಿಲ್ ನ್ಯಾಯಾಧೀಶರಾದ ಮಹಾವೀರ್ ಎಂ.ಕರಣ್ಣನವರ, ಜಿಲ್ಲಾಧಿಕಾರಿ ಸುರೇಶ್ ಬಿ.ಇಟ್ನಾಳ್, ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಉಮಾ ಪ್ರಶಾಂತ್, ಲೋಕಾಯುಕ್ತ ಪೊಲೀಸ್ ಅಧೀಕ್ಷಕರಾದ ಎಂ.ಎಸ್.ಕೌ¯ಪೂರೆ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.