ಹುಬ್ಬಳ್ಳಿ: ಕಾಂಗ್ರೆಸ್ ಪಕ್ಷ ಹುಟ್ಟೆದ್ದೇ ಮುಸಲ್ಮಾನರಿಗಾಗಿ. ಹೀಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪಾಕಿಸ್ತಾನದ ಏಜೆಟರಂತೆ ವರ್ತಿಸುತ್ತಿದ್ದಾರೆ. ಭಾರತದಲ್ಲೇ ಇದ್ದುಕೊಂಡು ಪಾಕಿಸ್ತಾನದ ಪರ ಬ್ಯಾಟಿಂಗ್ ಮಾಡುವ ಬದಲು, ಅಲ್ಲೇ ಹೋಗಿ ಪ್ರಧಾನಿಯಾಗಲಿ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಕಿಡಿಕಾರಿದರು.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರತ, ಪಾಕಿಸ್ತಾನ ವಿಭಜನೆಯಾಗಿದ್ದೇ ಕಾಂಗ್ರೆಸ್ ದುರುದ್ದೇಶದಿಂದ. ಅಂದು ಗಾಂಧಿ ಹಾಗೂ ಜವಾಹರ ಲಾಲ್ ನೆಹರು, ಡಾ. ಅಂಬೇಡ್ಕರ್ ಅವರ ಮಾತನ್ನು ಕೇಳಿದ್ದರೆ ಇಂದು ಭಾರತಕ್ಕೆ ಇಂತಹ ಸ್ಥಿತಿ ಬರುತ್ತಿರಲಿಲ್ಲ. ಕಾಂಗ್ರೆಸ್ ಯಾವತ್ತಿಗೂ ಹಿಂದುಗಳ ಪಕ್ಷವಾಗಲು ಸಾಧ್ಯವಿಲ್ಲ. ಎಲ್ಲಿಯವರೆಗೂ ಭಾರತದಲ್ಲಿ ಮುಸಲ್ಮಾನರು ಹಾಗೂ ಕಾಂಗ್ರೆಸ್ ಇರುತ್ತೊ ಅಲ್ಲಿಯವರೆಗೆ ಭಾರತದಲ್ಲಿ ಶಾಂತಿ ನೆಲೆಸಲು ಸಾಧ್ಯವಿಲ್ಲ ಎಂದರು.
ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಅವರನ್ನು ಸಂತಸಪಡಿಸಲು ಸಚಿವ ಸಂತೋಷ ಲಾಡ್, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮಾತನಾಡುತ್ತಾರೆ. ತಮ್ಮ ಮಂತ್ರಿಗಿರಿ ಉಳಿಸಿಕೊಳ್ಳುವ ಅನಿವಾರ್ಯತೆ ಅವರಿಗಿದೆ. ಆದರೆ, ಅವರು ಮೋದಿ ಎದುರು ಬಚ್ಚಾ ಎಂಬುದನ್ನು ಮರೆಯಬಾರದು ಎಂದು ಕುಟುಕಿದರು.