ಎಲೆಕ್ಟ್ರಾನಿಕ್ಸ್ ಘಟಕ ಉತ್ಪಾದನಾ ಯೋಜನೆಗೆ ಕೇಂದ್ರದ ಅನುಮತಿ

ನವದೆಹಲಿ: ಭಾರತವನ್ನು ಎಲೆಕ್ಟ್ರಾನಿಕ್ಸ್ ಪೂರೈಕೆ ಸರಪಳಿಯಲ್ಲಿ ಆತ್ಮ ನಿರ್ಭರ ಮಾಡುವ ಉದ್ದೇಶದಿಂದ ಎಲೆಕ್ಟ್ರಾನಿಕ್ಸ್ ಘಟಕ ಉತ್ಪಾದನಾ ಯೋಜನೆಗೆ ಕೇಂದ್ರ ಸಚಿವ ಸಂಪುಟ ಅನುಮತಿ ನೀಡಿದೆ.
ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಮಾಹಿತಿ ನೀಡಿದ ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವ ಅಶ್ವಿನಿ ವೈಷ್ಣವ್, ಎಲೆಕ್ಟ್ರಾನಿಕ್ ಘಟಕ ಉತ್ಪಾದನಾ ಪರಿಸರ ವ್ಯವಸ್ಥೆಯಲ್ಲಿ ದೊಡ್ಡ ಹೂಡಿಕೆ ಆಕರ್ಷಿಸುವ ಜೊತೆಗೆ ಪರಿಸರ ವ್ಯವಸ್ಥೆ ಅಭಿವೃದ್ಧಿಪಡಿಸಲು ಸಹಕಾರಿಯಾಗಲಿದೆ. ಇದರಿಂದ 25 ಲಕ್ಷ ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ತಿಳಿಸಿದ್ದಾರೆ. ಉತ್ಪಾದನೆಗೆ ಸಂಬಂಧಿಸಿದ ಪ್ರೋತ್ಸಾಹಕ ಯೋಜನೆ-ಪಿಎಲ್ ಐ ಅಡಿ ಅರೆವಾಹಕವಲ್ಲದ ಎಲೆಕ್ಟ್ರಾನಿಕ್ಸ್ ಘಟಕಗಳಿಗೆ 22 ಸಾವಿರದ 919 ಕೋಟಿ ರೂಪಾಯಿ ವೆಚ್ಚದ ಯೋಜನೆಗೆ ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ಹೇಳಿದರು.

ಪಿಂಚಣಿದಾರರಿಗೆ 7 ಸಾವಿರದ 716 ಕೋಟಿ ರೂಪಾಯಿ: ಕೇಂದ್ರ ಸರ್ಕಾರದ ನೌಕರರು ಹಾಗೂ ಪಿಂಚಣಿದಾರರಿಗೆ 2025ರ ಜನವರಿ 1 ರಿಂದ ಜಾರಿಗೆ ಬರುವಂತೆ ತುಟ್ಟಿ ಭತ್ಯೆ ಹಾಗೂ ತುಟ್ಟಿ ಪರಿಹಾರಕ್ಕಾಗಿ 7 ಸಾವಿರದ 716 ಕೋಟಿ ರೂಪಾಯಿಗೆ ಸಂಪುಟ ಮಂಜೂರಾತಿ ನೀಡಿದೆ ಎಂದು ಮಾಹಿತಿ ನೀಡಿದರು.